ಫೋನ್ಪೇ ಮಾಡುವುದಾಗಿ ನಂಬಿಸಿ ಅಂಗವಿಕಲ ಆಟೋ ಚಾಲಕನಿಗೆ ವಂಚಿಸಿದ ಯುವತಿ – Kannada News | Woman cheated disabled auto driver by using phonepe in Bengaluru
ಆನ್ಲೈನ್ ಮೂಲಕ ಹಣ ಪಾವತಿ ಮಾಡುವುದಾಗಿ ನಂಬಸಿ ವಿಶೇಷ ಚೇತನ ಆಟೋ ಚಾಲಕನಿಗೆ ಯುವತಿ ಮೋಸ ಮಾಡಿರುವ ಘಟನೆ ಬೆಂಗಳೂರಿನ ಹನುಮಂತನಗರದ ಪಿಇಎಸ್ ಕಾಲೇಜು ಬಳಿ ನಡೆದಿದೆ.
ಸಾಂದರ್ಭಿಕ ಚಿತ್ರ
ಬೆಂಗಳೂರು: ಆನ್ಲೈನ್ ಮೂಲಕ ಹಣ ಪಾವತಿ (Online Payment) ಮಾಡುವುದಾಗಿ ನಂಬಸಿ ಅಂಗವಿಕಲ ಆಟೋ ಚಾಲಕನಿಗೆ (Auto Driver) ಯುವತಿ ಮೋಸ ಮಾಡಿರುವ ಘಟನೆ ಬೆಂಗಳೂರಿನ (Bengaluru) ಹನುಮಂತನಗರದ ಪಿಇಎಸ್ ಕಾಲೇಜು (PES College) ಬಳಿ ನಡೆದಿದೆ. ಶಿವಕುಮಾರ್ ವಿಎಚ್ (58) ವಂಚನೆಗೆ ಒಳಗಾದ ಆಟೋ ಚಾಲಕ. ನಾಗರಭಾವಿ ಸಮೀಪದ ಮಹದೇಶ್ವರ ಲೇಔಟ್ನ ನಿವಾಸಿಯಾಗಿರುವ ಆಟೋ ಚಾಲಕ ಶಿವಕುಮಾರ್ ವಿಹೆಚ್ ಕೊರೊನಾ ಸಮಯದಲ್ಲಿ ಗ್ಯಾಂಗ್ರಿನ್ನಿಂದ ಬಲಗಾಲು ಕಳೆದುಕೊಂಡಿದ್ದರು. ಇದರಿಂದ ದೃತಿಗೆಡದೆ ತಮ್ಮ ಆಟೋ ಚಾಲನೆ ವೃತ್ತಿಯನ್ನು ಮುಂದುವರೆಸಿದ್ದಾರೆ.
ಶಿವಕುಮಾರ್ ಅವರು ಆಗಸ್ಟ್ 4 ರಂದು ಸ್ನೇಹಿತರೊಬ್ಬರಿಗೆ ಕರೆ ಮಾಡಿ ನಾನು ಈಗ ಚಂದ್ರಾ ಲೇಔಟ್ನಲ್ಲಿದ್ದೇನೆ ನನಗೆ ತಕ್ಷಣ ಹಣ ಬೇಕಾಗಿದೆ ಎಂದು ಹೇಳಿದ್ದಾರೆ. ಆಗ ಶಿವಕುಮಾರ್ ಅವರ ಸ್ನೇಹಿತ ಹನುಮಂತನಗರದ ಪಿಇಎಸ್ ಕಾಲೇಜು ಬಳಿ ಬಾ, ಹಣ ನೀಡುತ್ತೇನೆ ಎಂದು ಹೇಳಿದ್ದಾರೆ. ಇದೇ ವೇಳೆ 20 ವರ್ಷದ ಓರ್ವ ಯುವತಿ ಶಿವಕುಮಾರ್ ಅವರ ಬಳಿಗೆ ಬಂದು ನನ್ನನ್ನು ಹನುಮಂತನಗರ ಪಿಇಎಸ್ ಕಾಲೇಜು ಬಳಿ ಕರೆದುಕೊಂಡು ಹೋಗುವಂತೆ ಹೇಳಿದ್ದಾಳೆ.
ಇದಕ್ಕೆ ಒಪ್ಪಿದ ಶಿವಕುಮಾರ್ ಯುವತಿಯನ್ನು ಕರೆದುಕೊಂಡು ಹನುಮಂತನಗರದ ಪಿಇಎಸ್ ಕಾಲೇಜು ಬಳಿ ಹೋಗುತ್ತಿರುವಾಗ ದಾರಿ ಮಧ್ಯೆ ಶಿವಕುಮಾರ್ ಅವರು ತಮ್ಮ ಸ್ನೇಹಿತನಿಗೆ ಕರೆ ಮಾಡಿ ನಾನು ಪಿಇಎಸ್ ಕಾಲೇಜು ಬಳಿ ಬರುತ್ತಿದ್ದೇನೆ, ಹಣ ತರುವಂತೆ ಹೇಳಿದ್ದಾರೆ. ಇದನ್ನು ಯುವತಿ ಕೇಳಿಸಿಕೊಂಡಿದ್ದಾಳೆ. ಈ ವೇಳೆ ಯುವತಿ ನೀವು Phonepay ಉಪಯೋಗಿಸುತ್ತೀರಿಯೇ, ನಂಬರ್ ಹೇಳಿ ಎಂದು ಕೇಳಿದ್ದಾಳೆ. ಇದಕ್ಕೆ ಶಿವಕುಮಾರ್ ಫೋನ್ಪೇ ಇದೆ ಎಂದು ಹೇಳಿದ್ದಾರೆ. ಆಟೋ ದರವನ್ನು ಪಾವತಿಸಲು ನಂಬರ್ ಕೇಳಿರಬಹುದು ಎಂದು ತಿಳಿದು ಫೋನ್ಪೇ ನಂಬರ್ ನೀಡಿದ್ದಾರೆ.
ಶಿವಕುಮಾರ್ ಪಿಇಎಸ್ ಕಾಲೇಜು ಬಳಿ ಯುವತಿಯನ್ನು ಡ್ರಾಪ್ ಮಾಡಿದ್ದಾರೆ. ಇದೇ ವೇಳೆ ಇವರ ಸ್ನೇಹಿತ ಬಂದು ಶಿವಕುಮಾರ್ ಅವರಿಗೆ 25,000 ರೂ. ಕೊಟ್ಟು ಹೊರಟು ಹೋದರು. ಇಷ್ಟೊತ್ತಿನವರೆಗೂ ಅಲ್ಲಿಯೇ ಇದ್ದ ಯುವತಿ ಎದುರುಗಡೆ ಶಿವಕುಮಾರ್ ಹಣ ಎಣಿಸಲು ಆರಂಭಿಸಿದ್ದಾರೆ.
ಈ ಸಮಯದಲ್ಲಿ ಯುವತಿ ಶಿವಕುಮಾರ್ ಅವರ ಬಳಿ ಬಂದು ಅಂಕಲ್ ನಿಮಗೆ ಈ ಹಣದ ಅವಶ್ಯಕತೆ ಇದೆಯೇ ಎಂದು ಪ್ರಶ್ನಿಸಿದ್ದಾಳೆ. ಹೌದು ಎಂದು ಹೇಳಿದ್ದಾರೆ. ನಂತರ ಯುವತಿ ನಾನು ಕಾಲೇಜು ಶುಲ್ಕವನ್ನು ಪಾವತಿಸಬೇಕು, ಈ ಹಣ ನನಗೆ ನೀಡುತ್ತೀರಾ? ಕಾಲೇಜಿನಲ್ಲಿ ಡಿಜಿಟಲ್ ಪಾವತಿಗಳನ್ನು ಸ್ವೀಕರಿಸುತ್ತಿಲ್ಲ. ಮತ್ತು ನನ್ನ ಬಳಿ ನಗದು ಅಥವಾ ಡೆಬಿಟ್ ಕಾರ್ಡ್ ಇಲ್ಲ. ಹೀಗಾಗಿ ನನಗೆ ಈ ಹಣ ನೀಡಿ ನಾನು ನಿಮಗೆ ಫೋನ್ಪೇ ಮಾಡುತ್ತೇನೆ ಎಂದು ಹೇಳಿದ್ದಾಳೆ.
ಇದಕ್ಕೆ ಒಪ್ಪಿದ ಶಿವಕುಮಾರ್ ಯುವತಿಗೆ ಮೊದಲು ಹಣ ವರ್ಗಾಯಿಸಲು ಹೇಳಿದ್ದಾರೆ. ಅಂದರಂತೆ ಯುವತಿ ಆಟೊ ದರ ಸೇರಿದಂತೆ 23,500 ರೂ. ವರ್ಗಾವಣೆ ಮಾಡಿರುವುದಾಗಿ ಮೊಬೈಲ್ ಪರದೆಯನ್ನು ತೋರಿಸಿ ಹಣ ಪಡೆದಿದ್ದಾಳೆ. ನಂತರ ಯುವತಿ ಹೊರಟು ನಿಂತಳು. ಆಗ ಶಿವಕುಮಾರ್ ನನಗೆ ಇನ್ನು ಮೆಸೆಜ್ ಬಂದಿಲ್ಲ ಹೋಗಬೇಡಿ ತಡೆಯಿರಿ ಎಂದಿದ್ದಾರೆ.
ಆಗ ಯುವತಿ ತನ್ನ ಮೊಬೈಲ್ ನಂಬರ್ ಕೊಟ್ಟು ಏನಾದರೂ ತೊಂದರೆಯಿದ್ದರೆ ಕರೆ ಮಾಡಿ ಎಂದಳು. ಈ ವೇಳೆ ಶಿವಕುಮಾರ್ ಯುವತಿಯ ಫೋಟೋವನ್ನು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ನಂತರ ಯುವತಿ ಕಾಲೇಜಿನಲ್ಲಿ ಹಣ ತುಂಬಬೇಕು ಎಂದು ಹೊರಟು ಹೋಗಿದ್ದಾಳೆ. ಬಳಿಕ ಶಿವಕುಮಾರ್ ಬ್ಯಾಂಕ್ ಅಕೌಂಟ್ ಪರಿಶೀಲಿಸಿದಾಗ ಹಣ ಬಂದಿರಲಿಲ್ಲ. ಆಗ ಶಿವಕುಮಾರ್ ಅವರಿಗೆ ಬರಸಿಡಲು ಬಡೆದಂತಾಗಿದೆ. ನಾನು ಮೋಸ ಹೋದೆ ಎಂದುಕೊಂಡರು.
ಅಂಗವೈಕಲ್ಯದಿಂದ ಯುವತಿಯನ್ನು ಹಿಂಬಾಲಿಸಲು ಆಗಲಿಲ್ಲ. ನಂತರ ಶಿವಕುಮಾರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಗಿರಿನಗರ ಪೊಲೀಸರು ಐಪಿಸಿ ಸೆಕ್ಷನ್ 420 (ವಂಚನೆ ಮತ್ತು ಅಪ್ರಾಮಾಣಿಕತೆ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಯುವತಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ