ಕೆರೆಯಲ್ಲಿ ಮೀನು ಹಿಡಿಯಲು ತೆರಳಿದ್ದ ಇಬ್ಬರು ಯುವಕರು ನೀರುಪಾಲು – Kannada News | Chikkamagaluru News: Two boys who had gone fishing in the lake drowned
Chikkamagaluru News: ಕೆರೆಯಲ್ಲಿ ಮೀನು ಹಿಡಿಯಲು ತೆರಳಿದ್ದ ಇಬ್ಬರು ಯುವಕರು ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಮೂಡಿಗೆರೆಯ ಹ್ಯಾಂಡ್ಪೋಸ್ಟ್ ಬಳಿ ನಡೆದಿದೆ.
ಪ್ರಾತಿನಿಧಿಕ ಚಿತ್ರ
ಚಿಕ್ಕಮಗಳೂರು, ಆಗಸ್ಟ್ 05: ಕೆರೆಯಲ್ಲಿ ಮೀನು ಹಿಡಿಯಲು ತೆರಳಿದ್ದ ಇಬ್ಬರು ಯುವಕರು (boys) ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಮೂಡಿಗೆರೆಯ ಹ್ಯಾಂಡ್ಪೋಸ್ಟ್ ಬಳಿ ನಡೆದಿದೆ. ಹಾಸನ ಮೂಲದ ಕಿಶೋರ್(19), ತನ್ಮಯ್(18) ಮೃತರು. ಹಾಸನದಿಂದ ಕೂಲಿ ಕೆಲಸಕ್ಕೆ ಮೂಡಿಗೆರೆಗೆ ಬಂದಿದ್ದರು. ಇಬ್ಬರ ಶವಗಳನ್ನು ಕೆರೆಯಿಂದ ಅಗ್ನಿಶಾಮಕ ಸಿಬ್ಬಂದಿ ಹೊರತೆಗೆದಿದ್ದಾರೆ. ಮೂಡಿಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ತೆಂಗಿನ ಮರ ಏರಿದ್ದ ಯುವಕ ಆಯತಪ್ಪಿ ಕೆಳಗೆ ಬಿದ್ದು ಸಾವು
ಆನೇಕಲ್: ತೆಂಗಿನ ಮರ ಏರಿದ್ದ ಯುವಕ ಆಯತಪ್ಪಿ ಕೆಳಗೆ ಬಿದ್ದು ಮೃತಪಟ್ಟಿರುವಂತಹ ಘಟನೆ ಆನೇಕಲ್ ತಾಲ್ಲೂಕಿನ ಚಿನ್ನಯ್ನ ಪಾಳ್ಯದಲ್ಲಿ ನಡೆದಿದೆ. ಮುನಿರಾಜು (25) ಮೃತಪಟ್ಟ ದುರ್ದೈವಿ. ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ನಾಲ್ವರು ಸ್ನೇಹಿತರ ಜೊತೆಗೂಡಿ ಹೋಗಿದ್ದು, ಜಮೀನಿನೊಂದರಲ್ಲಿನ ತೆಂಗಿನ ಮರವೇರಿದ್ದ. ಆಯತಪ್ಪಿ ಕೆಳಗೆ ಬಿದ್ದು ಕುತ್ತಿಗೆ, ಬೆನ್ನು, ಕಾಲು ಮುರಿದು ಕೊಂಡಿದ್ದ.
ಜೊತೆಗಿದ್ದ ಸ್ನೇಹಿತರು ಪಕ್ಕದ ನಿರ್ಜನ ಪ್ರದೇಶದ ನೀಲಗಿರಿ ತೋಪಿನಲ್ಲಿ ಬಿಟ್ಟು ಪರಾರಿಯಾಗಿದ್ದರು. ರಾತ್ರಿ ಎಲ್ಲಾ ನೋವಿಗೆ ನರಳಾಟ ಅನುಭವಿಸಿದ್ದ ಮುನಿರಾಜು, ಬೆಳಗ್ಗೆ ಸ್ಥಳೀಯರು ಗಮನಿಸಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗಿದೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಆನೇಕಲ್ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ರಸ್ತೆ ಬದಿಯ ಹೋಟೆಲ್ಗೆ ನುಗ್ಗಿದ ಲಾರಿ: 9 ಬೈಕ್, 1 ಲಾರಿ ಸಂಪೂರ್ಣ ಜಖಂ
ಕೊಪ್ಪಳ: ಕುಡಿದು ಚಾಲನೆ ಮಾಡಿದ ಪರಿಣಾಮ ಲಾರಿಯೊಂದು ರಸ್ತೆ ಬದಿ ಹೋಟೆಲ್ ನುಗ್ಗಿದ್ದು, 9 ಬೈಕ್, 1 ಲಾರಿ ಸಂಪೂರ್ಣ ಜಖಂ ಆಗಿರುವಂತಹ ಘಟನೆ ಜಿಲ್ಲೆಯ ಕುಕನೂರು ತಾಲೂಕಿನ ಬನ್ನಿಕೊಪ್ಪ ಗ್ರಾಮದ ಬಳಿ ನಡೆದಿದೆ. ಸಿನಿಮೀಯ ರೀತಿಯಲ್ಲಿ ವಾಹನಗಳ ಮೇಲೆ ಚಾಲಕ ಲಾರಿ ಹರಿಸಿದ್ದಾನೆ. ಲಾರಿ ನುಗ್ಗಿದನ್ನು ಕಂಡು ಎದ್ನೋ ಬಿದ್ನೋ ಎಂದು ಜನ ಓಡಿದ್ದಾರೆ.
ಅದೃಷ್ಟವಶಾತ್ ಪ್ರಾಣಪಾಯಾದಿಂದ ಬೈಕ್ ಸವಾರರು ಪಾರಾಗಿದ್ದಾರೆ. ಬೆಳಗಾವಿ ಮೂಲದ ಲಾರಿ ಚಾಲಕ ಅಪಘಾತ ಮಾಡಿದ್ದು, ಲಾರಿ ಚಾಲಕನನ್ನು ಸ್ಥಳೀಯರು ಹಿಡಿದುಕೊಂಡಿದ್ದರು. ಸ್ಥಳಕ್ಕೆ ಕುಕನೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.