ಗದಗ: ನಕಲಿ ದಾಖಲೆ ಸೃಷ್ಟಿಸಿ 40 ಕೋಟಿ ಮೊತ್ತದ ಜಮೀನು ಲೂಟಿಗೆ ಪ್ಲಾನ್! ಆರು ಮಂದಿ ಅರೆಸ್ಟ್ – Kannada News | Six members of gang arrested for loots land worth over Rs 40 crore by forging documents in Gadag
ಕೋಟ್ಯಾಧಿಪತಿಗಳೇ ಹುಷಾರ್. ನಿಮ್ಮ ಕೋಟಿ ಕೋಟಿ ಮೊತ್ತದ ಆಸ್ತಿ ನಿಮ್ಮ ಹೆಸರಿನಲ್ಲೇ ಇವೆಯೋ ಅಂತ ಒಮ್ಮೆ ಚೆಕ್ ಮಾಡಿಕೊಳ್ಳಿ. ಏಕೆಂದರೆ, ನಕಲಿ ದಾಖಲೆ ಸೃಷ್ಟಿಸಿ ಜಮೀನು ಲೂಟಿ ಮಾಡುವ ಗ್ಯಾಂಗ್ ಸಕ್ರಿಯವಾಗಿದೆ. ಸದ್ಯ ಗ್ಯಾಂಗ್ನ ಆರು ಮಂದಿಯನ್ನು ಬಂಧಿಸಲಾಗಿದೆ.
ಜಮೀನು ಲೂಟಿ ಮಾಡಲು ಮುಂದಾಗಿ ಬಂಧಿತರಾದ ಆರೋಪಿಗಳು
ಗದಗ, ಆಗಸ್ಟ್ 6: ಜಿಲ್ಲೆಯಲ್ಲಿ ನಕಲಿ ದಾಖಲೆ ಸೃಷ್ಠಿ ಮಾಡಿ ಕೋಟಿ ಕೋಟಿ ಆಸ್ತಿ ಲಪಟಾಯಿಸುವ ಗ್ಯಾಂಗ್ ತಲೆಎತ್ತಿದೆ. ಈಗಾಗಲೇ ಎರಡರಿಂದ ಮೂರು ಆಸ್ತಿ ನುಂಗಿದ ಗ್ಯಾಂಗ್ ಈಗ 40 ಕೋಟಿಗೂ ಅಧಿಕ ಮೊತ್ತದ ಜಮೀನು ಲೂಟಿ ಮಾಡಿಲು ಹೋಗಿ ತಗಲಾಕಿಕೊಂಡಿದೆ. ಈ ಗ್ಯಾಂಗ್ನ ಕೃತ್ಯಕ್ಕೆ ಇಡೀ ಗದಗ (Gadag) ಜಿಲ್ಲೆಯ ಜನರೇ ದಂಗಾಗಿ ಹೋಗಿದ್ದಾರೆ.
ಗದಗ ನಗರದ ಜಿಲ್ಲಾಡಳಿತ ಭವನದ ಹಿಂದೆ ಕೇಶವದಾಸ್ ಸಹುಕಾರ್ ಫ್ಯಾಮಿಲಿಗೆ ಸೇರಿದ ಸರ್ವೇ ನಂಬರ್ 298, 20 ಎಕರೆ 34ಗುಂಟೆ ಜಮೀನು ಇದೆ. ಗದಗ ನಗರಕ್ಕೆ ಹೊಂದಿಕೊಂಡು ಇರುವುದರಿಂದ ರೀಯಲ್ ಎಸ್ಟೇಟ್ ವ್ಯವಹಾರ ಮಾಡಲು ಈ ಜಮೀನು ಹಾಗೇ ಇಟ್ಟಿದ್ದಾರೆ. ಇಲ್ಲಿ ಫ್ಲಾಟ್ಗಳನ್ನು ನಿರ್ಮಿಸಿ ಮಾರಾಟ ಮಾಡಿದರೆ ಸುಮಾರು 100 ಕೋಟಿಗೂ ಅಧಿಕ ಮೌಲ್ಯ ಆಗುತ್ತಂತೆ.
ಇಂಥ ದೊಡ್ಡ ಆಸ್ತಿ ಲೂಟಿಗೆ ಪ್ಲಾನ್ ಮಾಡಿದ್ದ ಖತರ್ನಾಕ ಗ್ಯಾಂಗ್ನ ಆರು ಸದಸದ್ಯರನ್ನು ಗದಗ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಾತಲಗೇರಿ ಗ್ರಾಮದ ರಂಗನಗೌಡ ಪಾಟೀಲ್, ಲಕ್ಷ್ಮೀಬಾಯಿ ರಂಗನಗೌಡ ಪಾಟೀಲ್, ಗಂಗಮ್ಮ ಕರಿಯಣ್ಣವರ, ಸವಿತಾ ಮೇಲ್ಮನಿ, ಕದಡಿ ಗ್ರಾಮದ ಈಶ್ವರ ಪೂಜಾರ, ಗದಗನ ಬೆಟಗೇರಿಯ ಸುಲೇಮಾನ ಮಾಳೆಕೊಪ್ಪ ಬಂಧಿತ ಆರೋಪಿಗಳಾಗಿದ್ದಾರೆ. ಆದರೆ, ಕಿಂಗ್ ಪಿನ್ ಎನ್ನಲಾದ ಕೃಷ್ಣಗೌಡ ಪಾಟೀಲ್ ಹಾಗೂ ಬಸವರಾಜ್ ಮೇಲ್ಮನಿ ಈ ಇಬ್ಬರು ನಾಪತ್ತೆಯಾಗಿದ್ದಾರೆ ಎಂದರು ಎಸ್ಪಿ ಬಿ.ಎಸ್.ನೇಮಗೌಡ ಹೇಳಿದ್ದಾರೆ.
ಶ್ರೀಮಂತರ ಆಸ್ತಿಗಳನ್ನೇ ಟಾರ್ಗೆಟ್ ಮಾಡುವ ಈ ಗ್ಯಾಂಗ್ ಈಗಾಗಲೇ ಕೋಟ್ಯಾಂತರ ಮೊತ್ತದ ಎರಡು ಆಸ್ತಿಗಳನ್ನು ಈಗಾಗಲೇ ನಕಲಿ ದಾಖಲೆ ಸೃಷ್ಠಿಸಿ ಲೂಟಿ ಮಾಡಿದೆ. ಈಗ ಮೂರನೇ ಜಮೀನನ್ನು ಲೂಟಿ ಮಾಡಲು ಹೋಗಿ ಸಬ್ ರಜಿಸ್ಟ್ರಾರ್ ಕಚೇರಿಯಲ್ಲಿ ಸಿಕ್ಕಾಕಿಕೊಂಡಿದೆ. ಗದಗನ ಕೇಶವ ದಾಸ್ ಸಾಹುಕಾರ್ ಫ್ಯಾಮಿಲಿ ಸದಸ್ಯರ ಆಸ್ತಿ ನಾವೇ ಒರಿಜಿನಲ್ ಮಾಲೀಕರು ಅಂತ ತೋರಿಸಲು ನಕಲಿ ಆಧಾರ್ ಕಾರ್ಡ್ ಸೃಷ್ಟಿಸಿದ್ದಾರೆ. ಇದರಲ್ಲಿ ಹೆಸರು ಮೂಲ ಮಾಲೀಕರದ್ದೇ ಆಗಿದ್ದು, ಫೋಟೋ ಮಾತ್ರ ಆರೋಪಿಗಳದ್ದಾಗಿದೆ.
ಕಾಗದ ಪತ್ರ ಇತ್ಯಾದಿಗಳನ್ನು ಸಿದ್ಧಪಡಿಸಿದ ಆರೋಪಿಗಳು ಇನ್ನೇನೂ ಸಬ್ ರಜಿಸ್ಟ್ರಾರ್ ಕಚೇರಿಯಲ್ಲಿ ಕಂಪ್ಯೂಟರ್ನಲ್ಲಿ ಮಾಲೀಕರ ಫೋಟು ತೆಗೆಯುವಾಗ ಗದಗ ರಜಿಸ್ಟ್ರಾರ್ ಪಂಚಾಕ್ಷರಿ ಅವರಿಗೆ ಅನುಮಾನ ಬಂದಿದೆ. ಆಗ ಕೆಲವರನ್ನು ಕರೆದು ವಿಚಾರಿಸಿದ್ದಾರೆ. ಆಗ ಇವರು ಮೂಲ ಮಾಲೀಕರು ಅಲ್ಲ ಅಂತ ಗೋತ್ತಾಗಿದೆ. ಆಗ ಜಾಣತನ ತೋರಿದ ಅಧಿಕಾರಿ ಪಂಚಾಕ್ಷರಿ ತಕ್ಷಣ ಮೂಲ ಮಾಲೀಕರು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಅದರಂತೆ, ಜಮೀನಿನ ಮೂಲ ಮಾಲಕರು ಹಾಗೂ ಪೊಲೀಸರು ಕಚೇರಿಗೆ ಆಗಮಿಸಿ ನಕಲಿ ಗ್ಯಾಂಗ್ನ ಆರು ಜನರನ್ನು ಬಂಧಿಸಿದ್ದಾರೆ. ಸಬ್ ರಜಿಸ್ಟ್ರಾರ್ ಕಚೇರಿ ಅಧಿಕಾರಿಗಳ ಸಮಯ ಪ್ರಜ್ನೆ, ಪ್ರಾಮಾಣಿಕತೆಗೆ ಕೋಟ್ಯಾಂತರ ಮೌಲ್ಯದ ಆಸ್ತಿ ಮೂಲ ಮಾಲೀಕರ ಬಳಿಯೇ ಉಳಿಯುವಂತಾಗಿದೆ. ಸಬ್ ರೆಜಿಸ್ಟ್ರಾರ್ ಕಚೇರಿ ಅಧಿಕಾರಿಗಳ ಕಾರ್ಯಕ್ಕೆ ಗದಗ ಜಿಲ್ಲೆಯಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ಈ ಖತರ್ನಾಕ್ ಜಾಲದ ಕೃತ್ಯಕ್ಕೆ ಇಡೀ ಗದಗ ಜಿಲ್ಲೆಯ ಜನತೆ ಬೆಚ್ಚಿಬಿದ್ದಿದ್ದಾರೆ. ಈಗಾಗಲೇ ಆರು ಜನರನ್ನು ಅರೆಸ್ಟ್ ಮಾಡಿದ ಗದಗ ಶಹರ ಠಾಣಾ ಪೊಲೀಸರು, ಪ್ರಮುಖ ಆರೋಪಿ ಕಿಂಗ್ ಪಿನ್ ಕೃಷ್ಣಗೌಡ ಪಾಟೀಲ್, ಬಸವರಾಜ್ ಮೇಲ್ಮನಿ ಬಂಧನಕ್ಕೆ ಜಾಲ ಬೀಸಿದ್ದಾರೆ. ಇನ್ನೂ ಈ ನಕಲಿ ಗ್ಯಾಂಗ್ನಲ್ಲಿ ಯಾರೆಲ್ಲಾ ಭಾಗಿಯಾಗಿದ್ದಾರೆ ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.