ಆಧಾರ್ ಬಳಸಿ ಜನ್ಮ ದಿನಾಂಕ ತಿದ್ದುಪಡಿ ಮಾಡಲು EPFO ಒಪ್ಪಿಗೆ
ಬೆಂಗಳೂರು, ಏಪ್ರಿಲ್ 6: ಕೊವಿಡ್19 ಲಾಕ್ ಡೌನ್ ಸಂದರ್ಭದಲ್ಲಿ ಕಾರ್ಮಿಕರ ಭವಿಷ್ಯ ನಿಧಿ ವಿಥ್ ಡ್ರಾ, ಆನ್ ಲೈನ್ ತಿದ್ದುಪಡಿ ಕುರಿತಂತೆ ಇಪಿಎಫ್ಒ ಹೊಸ ಪ್ರಕಟಣೆ ಹೊರಡಿಸಿದೆ. ಈಗ ಜನ್ಮದಿನಾಂಕ ತಿದ್ದುಪಡಿ ಕುರಿತಂತೆ ಇರುವ ನಿಯಮ ಪರಿಷ್ಕರಿಸಲಾಗಿದೆ.
ಆರ್ಥಿಕ ಪ್ಯಾಕೇಜ್ ಘೋಷಿಸಿದ್ದ ಸರ್ಕಾರ, ಇಪಿಎಫ್ಒ ನಿಯಂತ್ರಣ ನಿಯಮಗಳಲ್ಲಿ ಬದಲಾವಣೆ ಮಾಡಲಾಗಿದ್ದು, ಶೇ 75 ರಷ್ಟು ಹಣ ಅಥವಾ ಮೂರು ತಿಂಗಳ ಸಂಬಳ ವಿಥ್ ಡ್ರಾ ಮಾಡಲು ಅನುಮತಿ ಸಿಗಲಿದೆ. ಇದರಿಂದ 4 ಕೋಟಿ 80 ಲಕ್ಷ ಚಂದಾದಾರರಿಗೆ ಅನುಕೂಲವಾಗಲಿದೆ. ಆದರೆ ಈಗಾಗಲೇ ಸರಿಯಾದ ಯುಎಎನ್ ಕೆವೈಸಿ ಹೊಂದಿರುವ ಚಂದಾದಾರರು ಮಾತ್ರ ಸುಲಭವಾಗಿ ವಿಥ್ ಡ್ರಾ ಮಾಡಿಕೊಳ್ಳಬಹುದಾಗಿದೆ.
ಭವಿಷ್ಯ ನಿಧಿ ಚಂದಾದಾರರ ಖಾತೆಯಲ್ಲಿ ನಮೂದಿಸಿರುವ ಜನ್ಮ ದಿನಾಂಕದಲ್ಲಿ ಏನಾದರೂ ತಪ್ಪಿದ್ದು ಬದಲಾವಣೆ ಮಾಡಬೇಕಿದ್ದರೆ ತುಂಬಾ ಕಷ್ಟವಾಗುತ್ತಿತ್ತು. ಈಗ ಇದನ್ನು ಸರಿಪಡಿಸಲು ಆಧಾರ್ ಕಾರ್ಡ್ ಬಳಸಲು ಅನುಮತಿ ಸಿಕ್ಕಿದೆ. ಆಧಾರ್ ಕಾರ್ಡನ್ನು ಪುರಾವೆಯಾಗಿ ಸಲ್ಲಿಸಿ ಆನ್ ಲೈನ್ ನಲ್ಲಿ ಜನ್ಮ ದಿನಾಂಕ ಸರಿಪಡಿಸಿಕೊಳ್ಳಲು ಇಪಿಎಫ್ ಒ ಒಪ್ಪಿಗೆ ನೀಡಿದೆ.
ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಪಿಎಫ್ ಸಂಬಂಧಿಸಿದ ಆನ್ ಲೈನ್ ಸೇವೆಗಳು ಚಂದಾದಾರರಿಗೆ ಸೂಕ್ತವಾಗಿ ಸುಲಭವಾಗಿ ಲಭ್ಯವಾಗುವಂತೆ ಮಾಡಲು ಇಪಿಎಫ್ ಒ ಅನೇಕ ವಿಧಾನಗಳನ್ನು ಜಾರಿಗೆ ತಂದಿವೆ. ಇತ್ತೀಚೆಗೆ ಪ್ರಕಟಿಸಿರುವ ಪರಿಷ್ಕೃತ ನಿಯಮದ ಪ್ರಕಾರ, ಜನ್ಮ ದಿನಾಂಕದಲ್ಲಿ 3 ವರ್ಷಕ್ಕಿಂತ ಕಡಿಮೆ ವ್ಯತ್ಯಾಸ ಇದ್ದರೆ ಮಾತ್ರ, ಅಂಥಾ ಪ್ರಕರಣಗಳಲ್ಲಿ ಮಾತ್ರ ಆಧಾರ್ ಕಾರ್ಡ್ ಪುರಾವೆಯಾಗಿ ಬಳಸಲು ಅನುಮತಿ ನೀಡಲಾಗಿದೆ.ಆದರೆ, ಈಗಾಗಲೇ ಸರಿಯಾದ ಯುಎಎನ್ ಕೆವೈಸಿ ಹೊಂದಿರುವ ಚಂದಾದಾರರು ಈ ಬದಲಾವಣೆ ಬಯಸಿದ್ದರೆ ಮಾಡಬಹುದು.