ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 500 ಪೆಗಾಸಸ್ ಮಾರುಕಟ್ಟೆಗೆ
ಬೆಂಗಳೂರು: ರಾಯಲ್ ಎನ್‌ಫೀಲ್ಡ್ ಬೈಕ್ ತಯಾರಿಕಾ ಸಂಸ್ಥೆಯು ಸೀಮಿತ ಆವೃತ್ತಿಯ ‘ಕ್ಲಾಸಿಕ್ 500 ಪೆಗಾಸಸ್’ ಬೈಕ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಬೈಕ್ ಸಂಪೂರ್ಣ ಸೇನಾ ಆವೃತ್ತಿಯ ತದ್ರೂಪಿಯಾಗಿದ್ದು, ಹಲವಾರು ವಿಶೇಷತೆಗಳಿಂದ ಕೂಡಿದ್ದು ಬೈಕ್ ಸವಾರರ ಮೆಚ್ಚುಗೆಗೆ ಪಾತ್ರವಾಗಿದೆ.
2ನೇ ಮಹಾಯುದ್ಧದ ಸಮಯದಲ್ಲಿ ಬ್ರಿಟನ್ ಪ್ಯಾರಚೂಟ್ ರೆಜಿಮೆಂಟಿನ ಸಹಯೋಗಿದೊಂದಿಗೆ ಈ ಬೈಕ್‌ಗಳನ್ನು ಭೂಗತವಾಗಿ ನಿರ್ಮಾಣ ಮಾಡಿಲಾಗಿತ್ತು. ಪ್ಯಾರಚೂಟ್‌ನ ಸಹಾಯದಿಂದ ಯುದ್ಧಭೂಮಿಯಲ್ಲಿ ಈ ಬೈಕ್‌ಗಳನ್ನು ಇಳಿಸುತ್ತಿದ್ದದ್ದು ವಿಶೇಷ. ಇದಕ್ಕಾಗಿಯೇ ಈ ಬೈಕ್‌ಗಳನ್ನು ‘ಫ್ಲೈಯಿಂಗ್ ಫ್ಲಿ’ ಎಂದೇ ಕರೆಯಲಾಗುತ್ತಿತ್ತು.
ರಣಭೂಮಿಯಲ್ಲಿ ಈ ಬೈಕ್ ತೋರಿದ ಧೀರತನದ ನೆನಪಿಗಾಗಿಯೇ ರಾಯಲ್ ಎನ್‌ಫೀಲ್ಡ್ ಸಂಸ್ಥೆಯೂ ‘ಕ್ಲಾಸಿಕ್ 500 ಪೆಗಾಸಸ್’ ಬೈಕ್‌ಗಳನ್ನು ಪುನಃ ಮಾರುಕಟ್ಟೆಗೆ ಪರಿಚಯಿಸಿದೆ.
ವಿಶ್ವದಾದ್ಯಂತ ಕೇವಲ 1000 ಬೈಕ್‌ಗಳನ್ನು ಮಾತ್ರ ನಿರ್ಮಾಣ ಮಾಡಲಾಗುತ್ತಿದ್ದು, ಅದರಲ್ಲಿ 190 ಬೈಕ್‌ಗಳನ್ನು ಬ್ರಿಟನ್ ಮತ್ತು 250 ಬೈಕ್‌ಗಳನ್ನು ಭಾರತದಲ್ಲಿ ಬಿಕರಿ ಮಾಡಲು ಕಂಪನಿ ನಿರ್ಧರಿಸಿದೆ.
ವಿನ್ಯಾಸದಲ್ಲಿ ಈ ಬೈಕ್‌ಗಳು ಇತರ ರಾಯಲ್ ಎನ್‌ಫೀಲ್ಡ್ ಬೈಕ್‌ಗಳಿಗಿಂತ ವೈವಿಧ್ಯತೆಯಿಂದ ಕೂಡಿದು. ಪ್ರತಿ ಬೈಕ್‌ನ ಟ್ಯಾಂಕ್ ಮೇಲೆ ಮಿಲಿಟರಿ ವಾಹನಗಳು ಹೊಂದಿರುವ ರೀತಿ ವಿಶೇಷ ಸಂಖ್ಯೆಯನ್ನು ಅಚ್ಚು ಹಾಕಲಾಗಿದೆ. ಟ್ಯಾಂಕ್‌ನ ಬಲಭಾಗದಲ್ಲಿ ಧೀರತನದ ಪ್ರತೀಕವಾಗಿ ಬ್ರಿಟನ್ ಪ್ಯಾರಚೂಟ್ ರೆಜಿಮೆಂಟಿನ ಅಧಿಕೃತ ಲಾಂಛವಿದ್ದರೆ, ಟ್ಯಾಂಕ್‌ನ ಎಡಭಾಗದಲ್ಲಿ ಕೆಂಪು ಮತ್ತು ಹಸಿರು ಮಿಶ್ರಿತ ಚೌಕಾಕೃತಿಯಿದ್ದು ಅದರ ಮೇಲೆ ‘70‘ ಸಂಖ್ಯೆ ಅಚ್ಚು ಹಾಕಲಾಗಿದೆ.
ಹ್ಯಾಂಡಲ್ ಬಾರ್‌ಗೆ ಮಿಲಿಟರಿ ಸ್ಮರ್ಶ ನೀಡಲಾಗಿದ್ದು, ಬ್ರೌನ್ ಗ್ರಿಪರ್ ಅಳವಡಿಸಲಾಗಿದೆ. ಎಂಜಿನ್ ಮೇಲೆ ಹಳದಿ ಪಟ್ಟಿ ಇರಲಿದೆ. ಹಿಂಬದಿಯ ಸೀಟ್ ಬದಲು ಗಡಿಕಾಯುವ ಯೋಧರು ಕೊಂಡೊಯ್ಯುವ ಒಂದು ಜೋಡಿ ಬ್ಯಾಗ್‌ಗಳನ್ನು ಅಳವಡಿಸಿದ್ದು, ಇದನ್ನು ಕಳಚುವ ಹಾಗೂ ಮರು ಜೋಡಣೆ ಮಾಡುವ ರೀತಿ ವಿನ್ಯಾಸ ಮಾಡಲಾಗಿದೆ. ಈ ಬ್ಯಾಗ್ ಮೇಲೆ ‘1944’ ಎಂಬ ಅಂಕಿ ಇದ್ದು 2ನೇ ಮಹಾಯುದ್ಧವನ್ನು ಮತ್ತೊಮ್ಮೆ ನೆನಪಿಸುತ್ತದೆ.
ಪ್ಯಾಗಸಸ್ ಬೈಕ್‌ಗಳು ಸರ್ವೀಸ್ ಬ್ರೌನ್ ಮತ್ತು ಅಲಿವ್ ಡ್ರಾಬ್ ಗ್ರೀನ್ ಬಣ್ಣಗಳಲ್ಲಿ ಮಾರುಕಟ್ಟೆಗೆ ಬರಲಿವೆ. ಆದರೆ ಭಾರತದಲ್ಲಿ ಅಲಿವ್ ಡ್ರಾಬ್ ಗ್ರೀನ್ ಬಣ್ಣ ಸೇನೆಗೆ ಮಾತ್ರ ಸೀಮಿತ ಮಾಡಿರುವುದರಿಂದ ಸರ್ವೀಸ್ ಬ್ರೌನ್ ಬಣ್ಣದ ಎನ್‌ಫೀಲ್ಡ್ ಬೈಕ್‌ಗಳನ್ನಷ್ಟೆ ಮಾರಾಟ ಮಾಡಲಾಗುತ್ತದೆ. ಭಾರತದಲ್ಲಿ ಮಾರಾಟವಾಗುವ ಬೈಕ್‌ಗಳನ್ನು ಚೆನ್ನೈನ ಬೈಕ್ ತಯಾರಿಕಾ ಘಟಕದಲ್ಲಿ ನಿರ್ಮಿಸಲಾಗುತ್ತದೆ ಎಂದು ಕಂಪನಿ ತಿಳಿಸಿದೆ.
ಪೆಗಾಸ್ ಆವೃತ್ತಿಯ ಬೈಕ್‌ನ ಬೆಲೆ ₹2.49 (ಮುಂಬೈ ಆನ್‌ರೋಡ್) ನಿಗದಿ ಮಾಡಲಾಗಿದ್ದು, ಎಲ್ಲ ಬೈಕ್‌ಗಳನ್ನು ಆನ್‌ಲೈನ್ ಮೂಲಕ ಮಾರಾಟ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ ಹಾಗೂ ಈ ಬೈಕ್‌ನೊಂದಿಗೆ ವಿವಿಧ ಅಸ್ಸೆಸರಿಗಳನ್ನು ಉಚಿತವಾಗಿ ನೀಡಲಾಗುವುದು ಎಂದು ಪ್ರಕಟನೆಯಲ್ಲಿ ರಾಯಲ್ ಎನ್‌ಫೀಲ್ಡ್ ಸಂಸ್ಥೆ ತಿಳಿಸಿದೆ.