ಟ್ರಂಪ್-ಕಿಮ್ ಐತಿಹಾಸಿಕ ಭೇಟಿಗೆ ಸಿಂಗಾಪುರವೇ ವೇದಿಕೆಯಾಗಿದ್ದು ಏಕೆ ಗೊತ್ತಾ?
ಸಿಂಗಾಪುರ: ಅಮೆರಿಕ-ಉತ್ತರ ಕೊರಿಯಾ ದೇಶಗಳು ತಮ್ಮ ನಡುವಿನ ಬರೊಬ್ಬರಿ 7 ದಶಕಗಳ ವೈಮನಸ್ಸು ಮರೆಯಲು ನಿರ್ಧಾರ ಮಾಡಿದ ದಿನವೇ ಇದಕ್ಕೆ ಸೂಕ್ತ ತಟಸ್ಥ ವೇದಿಕೆ ಅಥವಾ ಜಾಗಕ್ಕೆ ಹುಡುಕಾಟ ಶುರುವಾಗಿತ್ತು.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಅವರ ಮುಖಾಮುಖಿ ಭೇಟಿಗಾಗಿ ಸೂಕ್ತ ಮತ್ತು ಭದ್ರತೆ ಇರುವ ಜಾಗಕ್ಕಾಗಿ ಉಭಯ ದೇಶಗಳು ಹುಡುಕಾಟ ನಡೆಸಿದ್ದವು. ಆರಂಭದಲ್ಲಿ ಕೊರಿಯಾದ ಮಿಲಿಟರಿ ಚಟುವಟಿಕೆ ನಿಷೇಧಿತ (DMZ-Korean Demilitarized Zone) ಅನ್ನು ಮೊದಲ ಆಯ್ಕೆ ಮಾಡಿಕೊಳ್ಳಲಾಯಿತಾದರೂ, ಬಳಿಕ ದಕ್ಷಿಣ ಕೊರಿಯಾ, ಉಲಾನ್ಬತಾರ್, ಮಂಗೋಲಿಯಾ; ಜಿನೀವಾ, ಸ್ವಿಟ್ಜರ್ಲ್ಯಾಂಡ್ ಮತ್ತು ಸ್ಟಾಕ್ಹೋಮ್, ಸ್ವೀಡನ್ ದೇಶಗಳ ಹೆಸರುಗಳು ಚರ್ಚೆಗೆ ಬಂದವು.
ಆದರೆ ಪಟ್ಟಿಯಲ್ಲೇ ಇಲ್ಲದ ಸಿಂಗಾಪುರವನ್ನು ಅಂತಿಮವಾಗಿ ಐತಿಹಾಸಿಕ ಭೇಟಿಗೆ ವೇದಿಕೆ ಎಂದು ಅಂತಿಮ ನಿರ್ಣಯ ಕೈಗೊಳ್ಳಲಾಯಿತು. ಈ ನಿರ್ಧಾರ ಹಲವರ ಹುಬ್ಬೇರಿಸಿದೆ ಯಾದರೂ ಸಿಂಗಾಪುರದ ಆಯ್ಕೆ ಹಿಂದೆ ಸಾಕಷ್ಟು ರಾಜತಾಂತ್ರಿಕ ವಿಚಾರಗಳು ಕೆಲಸ ಮಾಡಿವೆ. ಬದ್ಧ ವೈರಿಗಳ ಭೇಟಿಗಾಗಿ ಉಭಯ ದೇಶಗಳೂ ಸಮಾಧಾನಕರ ವೇದಿಕೆಯನ್ನೇ ಆರಿಸಬೇಕಿತ್ತು. ಈ ಹಿನ್ನಲೆಯಲ್ಲಿ ಸಿಂಗಾಪುರ ಇದಕ್ಕೆ ಸೂಕ್ತ ವೇದಿಕೆ ಎಂದು ಅಧಿಕಾರಿಗಳು ಭಾವಿಸಿದ್ದರು.
ಕಾರಣ ರಾಜತಾಂತ್ರಿಕ ಮಟ್ಟದಲ್ಲಿ ಸಿಂಗಾಪುರ ಅಮೆರಿಕ ಹಾಗೂ ಉತ್ತರ ಕೊರಿಯಾ ಜತೆ ಸಮಾನ ಬಾಂಧವ್ಯ ಸಾಧಿಸಿದೆ. ಕಳೆದ 40 ವರ್ಷಗಳಿಂದ ಸಿಂಗಾಪುರ ಉತ್ತರ ಕೊರಿಯಾದೊಂದಿಗೆ ಉತ್ತಮ ಬಾಂಧವ್ಯ ಹೊಂದಿದೆ. ಅಂತೆಯೇ ಸಿಂಗಾಪುರದಲ್ಲಿ ಸಾಕಷ್ಟು ಅಮೆರಿಕ ರಾಜತಾಂತ್ರಿಕರು ಕೆಲಸ ಮಾಡುತ್ತಿದ್ದು, ಸಿಂಗಾಪುರ ಕೂಡ ಅಮೆರಿಕದ ಬಹುಕಾಲದ ವಾಣಿಜ್ಯ ಗ್ರಾಹಕ ದೇಶವಾಗಿದೆ. ಇದೇ ಕಾರಣಕ್ಕೆ ಸಿಂಗಾಪುರವನ್ನು ಕಿಮ್-ಟ್ರಂಪ್ ಐತಿಹಾಸಿಕ ಭೇಟಿಯ ವೇದಿಕೆಯಾಗಿ ನಿರ್ಣಯ ಕೈಗೊಳ್ಳಲಾಯಿತು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಅಂತೆಯೇ ಈ ಹಿಂದೆಯೂ ಕೂಡ ಇದೇ ಸಿಂಗಾಪುರ ಮತ್ತೊಂದು ಬದ್ಧ ವೈರಿಗಳ ಭೇಟಿಗೆ ವೇದಿಕೆ ಮಾಡಿಕೊಟ್ಟಿತ್ತು. ಚೀನಾದ ಕ್ಸಿ ಜಿನ್ ಪಿಂಗ್ ಮತ್ತು ಆ ದೇಶದ ಬದ್ಥ ವೈರಿ ತೈವಾನ್ ಅಧ್ಯಕ್ಷ 2015ರಲ್ಲಿ ಇದೇ ಸಿಂಗಾಪುರದಲ್ಲಿ ತಮ್ಮ ಮೊದಲ ದ್ವಿಪಕ್ಷೀಯ ಮಾತುಕತೆ ನಡೆಸಿದ್ದರು. ಇದಲ್ಲದೆ ಭಾರತ ಮತ್ತು ಚೀನಾ ನಡುವಿನ ಐತಿಹಾಸಿಕ ಶಾಂಘ್ರಿಲಾ ಸಭೆ ಕೂಡ ಇದೇ ಸಿಂಗಾಪುರದಲ್ಲೇ ಆಯೋಜನೆಯಾಗಿತ್ತು. ಇವೆಲ್ಲದಕ್ಕೂ ಕಾರಣ ಸಿಂಗಾಪುರದ ಭದ್ರತೆ ಮತ್ತು ಸ್ಥಳೀಯ ಆಡಳಿತ.
ಹೌದು..ಸಿಂಗಾಪುರದಲ್ಲಿ ಪ್ರತಿಭಟನೆ ಅಥವಾ ಇನ್ನಾವುದೇ ಪ್ರಮುಖ ಗಲಭೆಗಳು ನಡೆದಿಲ್ಲ. ಅಲ್ಲದೆ ಭದ್ರತಾ ವಿಚಾರದಲ್ಲಿ ಸಿಂಗಾಪುರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದೆ. ಸಿಂಗಾಪುರದ ಆಂತರಿಕ ಭದ್ರತೆ, ಗುಪ್ತಚರ ಇಲಾಖೆಗಳು ವಿಶ್ವದಲ್ಲೇ ಉತ್ತಮ ಎಂದು ಖ್ಯಾತಿ ಗಳಿಸಿವೆ. ಇದೇ ಕಾರಣಕ್ಕೆ ಹಾಲಿವುಡ್, ಬಾಲಿವುಡ್ ಸೇರಿದಂತೆ ವಿಶ್ವದ ನಾನಾ ಚಿತ್ರರಂಗಗಳಿಗೆ ಇದೇ ಸಿಂಗಾಪುರ ಚಿತ್ರೀಕರಣದ ಪ್ರಮುಖ ಹಾಟ್ ಸ್ಪಾಟ್ ಆಗಿದೆ.