ಅಣ್ವಸ್ತ್ರಗಳು ನಾಶವಾಗುವವರೆಗೆ ಕೊರಿಯಾ ಮೇಲಿನ ನಿರ್ಬಂಧ ತೆರುವು ಇಲ್ಲ: ಟ್ರಂಪ್
ಸಿಂಗಪೂರ್: ಅಣ್ವಸ್ತ್ರಗಳು ಸಂಪೂರ್ಣ ನಾಶಮಾಡುವವರೆಗೆ ಉತ್ತರ ಕೊರಿಯಾ ಮೇಲೆ ಹೇರಲಾಗಿರುವ ನಿರ್ಬಂಧ ತೆರವುಗೊಳಿಸುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಸಿಂಗಪೂರ್ ನಲ್ಲಿ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಅವರೊಂದಿಗೆ ಸಭೆ ನಡೆಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿರುವ ಡೊನಾಲ್ಡ್ ಟ್ರಂಪ್ ಕಿಮ್-ಜಾಂಗ್-ಉನ್ ಅವರ ಭೇಟಿಯ 24 ಗಂಟೆಗಳ ಅವಧಿಯನ್ನು ಮಹತ್ತರವಾದ ಅವಧಿ ಎಂದು ಬಣ್ಣಿಸಿದ್ದಾರೆ.
ಈ ವೇಳೆ ದ್ವಿಪಕ್ಷೀಯ ಮಾತುಕತೆ ಬಗ್ಗೆಯೂ ಪ್ರತಿಕ್ರಿಯೆ ನೀಡಿರುವ ಡೊನಾಲ್ಡ್ ಟ್ರಂಪ್, ಸಭೆಯ ನಂತರ ವಿಶ್ವವನ್ನುದ್ದೇಶಿಸಿ ಮಾತನಾಡುವುದು ಹೆಮ್ಮೆಯ ಸಂಗತಿಯಾಗಿದ್ದು, ಕಿಮ್-ಜಾಂಗ್-ಉನ್ ಅವರೊಂದಿಗೆ ನಡೆದ ಮಾತುಕತೆ ಸಕಾರಾತ್ಮಕವಾಗಿತ್ತು ಎಂದು ಹೇಳಿದ್ದಾರೆ. ಮಾತುಕತೆ ವೇಳೆ ಉತ್ತರ ಕೊರಿಯಾ ಮೇಲೆ ವಿಧಿಸಲಾಗಿರುವ ನಿರ್ಬಂಧಗಳ ಬಗ್ಗೆಯೂ ಚರ್ಚೆ ನಡೆಸಲಾಗಿದ್ದು, ಅಣ್ವಸ್ತ್ರಗಳ ಪ್ರದೇಶಗಳು ಹಾಗೂ ಅಣ್ವಸ್ತ್ರಗಳು ಸಂಪೂರ್ಣ ನಾಶವಾಗುವವರೆಗೆ ನಿರ್ಬಂಧ ತೆರವುಗೊಳಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಉತ್ತರ ಕೊರಿಯಾ ಹಾಗೂ ಅಮೆರಿಕ ಶತೃ ದೇಶಗಳಾಗಿರಬೇಕಿಲ್ಲ, ಕಿಮ್-ಜಾಂಗ್-ಉನ್ ಅವರೊಂದಿಗೆ ಮಾನವ ಹಕ್ಕುಗಳ ಬಗ್ಗೆಯೂ ಮಾತುಕತೆ ನಡೆಸಲಾಗಿದೆ, ಕಿಮ್-ಜಾಂಗ್-ಉನ್ ಓರ್ವ ಉತ್ತಮ ಸಮಾಲೋಚಕ ಎಂದು ಟ್ರಂಪ್ ಬಣ್ಣಿಸಿದ್ದಾರೆ. ಇದೇ ವೇಳೆ ದಕ್ಷಿಣ ಕೊರಿಯಾದಲ್ಲಿರುವ 32,000 ಅಮೆರಿಕ ಯೋಧರ ಬಗ್ಗೆಯೂ ಟ್ರಂಪ್ ಮಾತನಾಡಿದ್ದು, ದಕ್ಷಿಣ ಕೊರಿಯಾದಲ್ಲಿರುವ ಅಮೆರಿಕ ಯೋಧರನ್ನು ವಾಪಸ್ ಕರೆಸಿಕೊಳ್ಳುವುದಕ್ಕೆ ಸೂಕ್ತ ಸಮಯವಾಗಿದೆ, ಯುದ್ಧಗಳನ್ನು ನಿಲ್ಲಿಸುವುದರಿಂದ ಅಮೆರಿಕಾಗೆ ಸಾಕಷ್ಟು ಹಣ ಉಳಿತಾಯವಾಗಲಿದೆ ಎಂದು ಟ್ರಂಪ್ ಅಭಿಪ್ರಾಯಪಟ್ಟಿದ್ದಾರೆ.