ಐಟಿ ಕಚೇರಿ ಅಗ್ನಿ ಅವಘಡದ ಹಿಂದೆ ಷಡ್ಯಂತ್ರ, ನೀರವ್ ಮೋದಿ ಕಡತಗಳ ನಾಶ ಕುರಿತು ಕಾಂಗ್ರೆಸ್ ಶಂಕೆ
ಮುಂಬೈ: ಭಾನುವಾರ ಮುಂಬೈ ಐಟಿ ಇಲಾಖೆ ಕಚೇರಿಯಲ್ಲಿ ನಡೆದ ಅಗ್ನಿ ಅವಘಡ ಪ್ರಕರಣದಲ್ಲಿ ಷಡ್ಯಂತ್ರ ಅಡಗಿದೆ ಎಂದು ಕಾಂಗ್ರೆಸ್ ಪಕ್ಷ ಆರೋಪಿಸಿದೆ.
ಬಹುಕೋಟಿ ಆರ್ಥಿಕ ವಂಚನೆ ಪ್ರಕರಣದ ಪ್ರಮುಖ ಆರೋಪಿ ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ಪ್ರಕರಣಗಳಿಗೆ ಸಂಬಂಧಿಸಿದ ಪ್ರಮುಖ ಕಡತಗಳು ಮುಂಬೈ ಕಚೇರಿಯಲ್ಲೇ ಇದ್ದವು. ಹೀಗಾಗಿ ಅಲ್ಲಿ ನಡೆದ ಅಗ್ನಿ ಅವಘಡದಲ್ಲಿ ಈ ಕಡತಗಳು ನಾಶವಾಗಿದೆ ಎಂದು ಕಾಂಗ್ರೆಸ್ ಪಕ್ಷ ಆರೋಪಿಸಿದೆ.
ಅಲ್ಲದೆ ಈ ಕಡತಗಳು ಮಾತ್ರವಲ್ಲದೇ ಆರ್ಥಿಕ ಅಪರಾಧಗಳಿಗೆ ಸಂಬಂಧಿಸಿದ ಸುಮಾರು ಕಡತಗಳು ಈ ಅಗ್ನಿ ಅವಘಡದಲ್ಲಿ ನಾಶವಾಗಿರುವ ಕುರಿತೂ ಕಾಂಗ್ರೆಸ್ ಶಂಕೆ ವ್ಯಕ್ತಪಡಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ತೆರಿಗೆ ಇಲಾಖೆ, ಕಾಂಗ್ರೆಸ್ ಪಕ್ಷದ ಆರೋಪದಲ್ಲಿ ಹುರುಳಿಲ್ಲ. ಅಗ್ನಿ ಅವಘಡದಲ್ಲಿ ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ಪ್ರಕರಣಗಳ ಕಡತಗಳು ನಾಶವಾಗಿಲ್ಲ ಎಂದು ಸ್ಪಷ್ಟನೆ ನೀಡಿವೆ.