‘ಗಾಸಿಪ್’ಗೆ ಬ್ರೇಕ್: ಫೇಸ್ ಬುಕ್, ವಾಟ್ಸಪ್ ಬಳಕೆ ಮೇಲೆ ತೆರಿಗೆ ಹೇರಿದ ಉಗಾಂಡ ಸರ್ಕಾರ
ಕಂಪಾಲಾ: ಸುಳ್ಳುಸುದ್ದಿ ಮತ್ತು ಗಾಸಿಪ್ ಗಳಿಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಉಗಾಂಡ ಸರ್ಕಾರ ಖ್ಯಾತ ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್ ಮತ್ತು ವಾಟ್ಸಪ್ ಬಳಕೆ ಮೇಲೆ ತೆರಿಗೆ ವಿಧಿಸಿದೆ.
ಈ ಬಗ್ಗೆ ಉಗಾಂಡ ಸರ್ಕಾರ ಸಂಸತ್ತಿನಲ್ಲಿ ಕಾಯ್ದೆಯೊಂದಕ್ಕೆ ಒಪ್ಪಿಗೆ ನೀಡಿದ್ದು, ಅದರನ್ವಯ ಉಗಾಂಡದಲ್ಲಿ ಇನ್ನುಮುಂದೆ ಸಾಮಾಜಿಕ ಜಾಲತಾಣ ಬಳಕೆ ಮಾಡುವವರ ಮೇಲೆ ಹೆಚ್ಚುವರಿ ತೆರಿಗೆ ವಿಧಿಸುವ ಮಸೂದೆಯನ್ನು ಶುಕ್ರವಾರ ಅಂಗೀಕರಿಸಲಾಗಿದೆ. ವಿಶ್ವದ ಹಿಂದುಳಿದ ದೇಶಗಳಲ್ಲಿ ಒಂದಾಗಿರುವ ಉಗಾಂಡ ಸರ್ಕಾರದ ಈ ವಿವಾದಾತ್ಮಕ ಕಾಯ್ದೆ ಇದೀಗ ವಿಶ್ವಾದ್ಯಂಚ ವ್ಯಾಪಕ ಚರ್ಚಗೆ ಕಾರಣವಾಗಿದೆ. ಈ ಕಾಯ್ದೆಯನ್ವಯ ಪ್ರಮುಖ ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ಟ್ವಿಟರ್, ವಾಟ್ಸ್ಆ್ಯಪ್ ಬಳಕೆದಾರರು ಪ್ರತಿದಿನ 3.21 ರೂ. (5 ಯುಎಸ್ ಸೆಂಟ್) ತೆರಿಗೆ ಪಾವತಿಸಬೇಕಿದೆ.
ವದಂತಿಗಳಿಗೆ ಬ್ರೇಕ್ ಹಾಕಲು ಹೊಸ ತೆರಿಗೆ ಎಂದು ಉಗಾಂಡ ಸರ್ಕಾರ
ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ವದಂತಿಗಳು ಹೆಚ್ಚಾಗಿ ಹರಡುತ್ತಿದ್ದು, ಇಂತಹ ವದಂತಿಗಳನ್ನು ನಿಯಂತ್ರಿಸಲು ಹೊಸ ಕಾಯಿದೆ ರೂಪಿಸಲಾಗಿದೆ ಎಂದು ಉಗಾಂಡ ಅಧ್ಯಕ್ಷ ಯೊವೆರಿ ಮ್ಯೂಸೆವೆನಿ ಹೇಳಿದ್ದಾರೆ. ಜು.1 ರಿಂದ ಈ ಕಾಯ್ದೆ ಜಾರಿಗೆ ಬರಲಿದೆ ಎನ್ನಲಾಗಿದೆ. ಆದರೆ, ಸಾಮಾಜಿಕ ಜಾಲತಾಣಗಳನ್ನು ಬಳಸುವ ವ್ಯಕ್ತಿಗಳ ಮೇಲೆ ಹೇಗೆ ನಿಗಾ ಇಡಲಾಗುತ್ತದೆ? ಅವರಿಂದ ಹೇಗೆ ತೆರಿಗೆ ಸಂಗ್ರಹಿಸಲಾಗುತ್ತದೆ ಎಂಬ ಬಗ್ಗೆ ಸರ್ಕಾರ ಯಾವುದೇ ಮಾಹಿತಿ ನೀಡಿಲ್ಲ.
ಉಗಾಂಡ ಸರ್ಕಾರದ ಕ್ರಮಕ್ಕೆ ವ್ಯಾಪಕ ವಿರೋಧ
ಇನ್ನು ಉಗಾಂಡ ಸರ್ಕಾರದ ಈ ಕ್ರಮಕ್ಕೆ ವ್ಯಾಪಕ ವಿರೋಧ ಕೂಡ ವ್ಯಕ್ತವಾಗಿದೆ. 1986 ರಿಂದ ಅಧಿಕಾರದಲ್ಲಿರುವ ಅಧ್ಯಕ್ಷರ ವಿರುದ್ಧ ಕಟು ಟೀಕೆಗೆ ಕಡಿವಾಣ ಹಾಕಲು ಈ ಕ್ರಮಕೈಗೊಳ್ಳಲಾಗಿದೆ ಎಂದು ವಿಪಕ್ಷಗಳು ಆರೋಪಿಸಿವೆ. ಹೇಳಲಾಗಿದೆ. 2016ರ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲೂ ಸಾಮಾಜಿಕ ಜಾಲತಾಣಗಳನ್ನು ನಿರ್ಬಂಧಿಸುವ ಮೂಲಕ ಅಧ್ಯಕ್ಷ ಯೊವೆರಿ ವ್ಯಾಪಕ ಟೀಕೆಗೆ ಗುರಿಯಾಗಿದ್ದರು.