ಬಿಡುಗಡೆಗೆ ಸಜ್ಜಾದ ಲ್ಯಾಂಬ್ರೆಟಾ ಎಲೆಕ್ಟ್ರಿಕ್ ಸ್ಕೂಟರ್ ವಿಶೇಷತೆ ಏನು?
ಕಾರಣಾಂತರಗಳಿಂದ ಸ್ಕೂಟರ್ ಉತ್ಪಾದನೆದಿಂದ ದೂರ ಉಳಿದಿದ್ದ ಸ್ವಿಡನ್ ಮೂಲದ ಐಕಾನಿಕ್ ಸ್ಕೂಟರ್ ಬ್ರ್ಯಾಂಡ್ ಲ್ಯಾಂಬ್ರೆಟಾ ಸಂಸ್ಥೆಯು ಇದೀಗ ಹೊಸ ಸ್ಕೂಟರ್ ಉತ್ಪನ್ನಗಳೊಂದಿಗೆ ಮತ್ತೊಮ್ಮೆ ಕಮಾಲ್ ಮಾಡಲು ಸಜ್ಜಾಗುತ್ತಿದೆ. ಇಟಲಿಯ ಮಿಲಾನ್ ಶೋ (ಇಐಸಿಎಂಎ)ನಲ್ಲಿ ಹೊಸ ಲ್ಯಾಂಬ್ರೆಟಾಗಳು ಕಾಣಿಸಿಕೊಂಡಿದ್ದು, 2019ಕ್ಕೆ ಭಾರತಕ್ಕೆ ಬರುವ ವಿಷಯ ಪ್ರಸ್ತಾಪವಾಗಿದೆ.
ಎರಡು ದಶಕಗಳಿಂದ ಜಾಗತಿಕ ಮಾರುಕಟ್ಟೆಯಲ್ಲಿ ಮಾಯವಾಗಿದ್ದ ಈ ಸ್ಕೂಟರ್ ಗಳು ಮತ್ತೆ ತಮ್ಮ ಛಾಪು ಮೂಡಿಸಲು ಬರುತ್ತಿವೆ. ಅವುಗಳಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಗಳು ಸಹ ಸೇರಿವೆ ಎನ್ನಲಾಗಿದ್ದು, ಪ್ರಿಮಿಯಂ ವೈಶಿಷ್ಟ್ಯತೆಗಳೊಂದಿಗೆ ಗ್ರಾಹಕರನ್ನು ರಂಜಿಸವಲ್ಲಿ ಯಶಸ್ವಿಯಾಗುವ ಎಲ್ಲಾ ಗುಣಲಕ್ಷಣಗಳು ಹೊಸ ಸ್ಕೂಟರಿನಲ್ಲಿವೆ. ವಿ50 ಸ್ಪೆಷೆಲ್, ವಿ125 ಸ್ಪೆಷೆಲ್ ಮತ್ತು ವಿ 200 ಸ್ಪೆಷೆಲ್ ಈ ಮೂರೂ ಸ್ಕೂಟರ್ ಸದ್ಯಕ್ಕೆ ಸಾಲಿನಲ್ಲಿವೆ.
ಫಿಕ್ಸಡ್ ಫೆಂಡರ್ ಹಾಗೂ ಫ್ಲೆಕ್ಸ್ ಫೆಂಡರ್ ಎಂಬ ಎರಡು ಆಯಾಮಗಳಲ್ಲಿ ಸ್ಕೂಟರ್ ಲಭ್ಯ. ಹೊಸ ಶ್ರೇಣಿಯ ಈ ಲ್ಯಾಂಬ್ರೆಟಾವನ್ನು ಥೈವಾನ್ ನಲ್ಲಿ ಅಭಿವೃದ್ಧಿಪಡಿಸಲಾಗಿದೆ. ಈ ಮೂರೂ ವಾಹನಗಳದ್ದೂ ಸ್ಟೀಲ್ ದೇಹವಾಗಿದ್ದು, ವಿ 50 ಸ್ಪೆಶಲ್ , 49.5 ಸಿಸಿ ಏರ್ ಕೂಲ್ಡ್ ಕಾರ್ಬುರೇಟೆಡ್ ಸಿಂಗಲ್ ಸಿಲಿಂಡರ್ ಮೋಟಾರು ಹೊಂದಿದೆ.
ಇದು 3.5 ಎಚ್ ಪಿ-7,500 ಆರ್ ಪಿಎಂ ಹಾಗೂ 3.4ಎನ್ ಎಂ ಟಾರ್ಕ್-6,500ಆರ್ ಪಿಎಂ ಶಕ್ತಿ ಉತ್ಪಾದಿಸಲಿದೆ. ಸಿವಿಟಿ ಮತ್ತು ಕಾನ್ಫಿಗರೇಷನ್ ಎಲ್ಲಾ ವಾಹನಗಳಿಗೂ ಒಂದೇ ಇರಲಿದೆ. ವಿ125 ಸ್ಪೆಶಲ್ ಗೆ 124.7ಸಿಸಿ ಫ್ಯುಯೆಲ್ ಇಂಜೆಕ್ಟೆಡ್ ಮೋಟಾರು ಇದ್ದು, 10.1ಎಚ್ ಪಿ-8,500ಆರ್ ಪಿಎಂ ಮತ್ತು 9.2ಎನ್ ಎಂ ಟಾರ್ಕ್- 7,000 ಆರ್ ಪಿಎಂ ಶಕ್ತಿ ಉತ್ಪಾದಿಸುತ್ತದೆ. ವಿ200 ಸ್ಪೆಶಲ್ ಮೋಟಾರು ಕೂಡ ಫ್ಯುಯೆಲ್ ಇಂಜೆಕ್ಟೆಟ್ 168.9ಸಿಸಿ ಮತ್ತು 12.1ಎಚ್ ಪಿ-7,500ಆರ್ ಪಿಎಂ, 12.5 ಎನ್ ಎಂ ಟಾರ್ಕ್ -5,500ಆರ್ ಪಿಎಂ ಶಕ್ತಿ ಉತ್ಪಾದಿಸಲಿದೆ. ಮೂರೂ ಸ್ಕೂಟರ್ ಗಳಿಗೆ 6.5 ಲೀಟರ್ ಫ್ಯುಯೆಲ್ ಟ್ಯಾಂಕ್ ನೀಡಲಾಗಿದೆ. ಈ ವಿ ಸ್ಪೆಷೆಲ್ ವಾಹನಗಳಿಗೆ ಎಲ್ ಇಡಿ ಹೆಡ್ ಲೈಟ್ ಗಳು ಹಾಗೂ ಸ್ಟಾಂಡರ್ಡ್ ಫಿಟ್ ಮೆಂಟ್ ಇರಲಿದೆ.
ಟೇಲ್ ಲೈಟ್ ಹಾಗೂ ಟರ್ನ್ ಸಿಗ್ನಲ್ ಇಂಡಿಕೇಟರ್ ಗಳೂ ಇದ್ದು, ಅವೂ ಎಲ್ ಇಡಿ ಯುನಿಟ್ ಗಳಾಗಿವೆ. 220ಎಂಎಂ ಹೈಡ್ರಾಲಿಕ್ ಡಿಸ್ಕ್ ಬ್ರೇಕ್, ಟೆಲಿಸ್ಕೋಪಿಕ್ ಫೋರ್ಕ್, ಎಲ್ಲಾ ಮಾಡೆಲ್ ಗಳಲ್ಲೂ ಇವೆ. ಮುಂಭಾಗದಲ್ಲಿ 220 ಎಂಎಂ ಡಿಸ್ಕ್ ಬ್ರೇಕ್ ಹಾಗೂ 110 ಎಂಎಂ ರಿಯರ್ ಡ್ರಂ ಬ್ರೇಕ್ ಗಳಿವೆ. ವಿ125ಗೆ ಕಂಬೈನ್ಡ್ ಬ್ರೇಕಿಂಗ್ ಸಿಸ್ಟಮ್ ಇದ್ದು, ವಿ200 ಮಾತ್ರ ಬಾಶ್ ಎಬಿಎಸ್ ಯುನಿಟ್ ಹೊಂದಿದೆ.
12-ವೋಲ್ಟ್ ಚಾರ್ಜಿಂಗ್ ಸಾಕೆಟ್ ಅನ್ನು ಎಲ್ಲಾ ಸ್ಕೂಟರ್ ಗಳಲ್ಲೂ ನೀಡಲಾಗಿದೆ. ಇವುಗಳ ಜೊತೆ ಜೊತೆಗೆ ಎಲೆಕ್ಟ್ರಿಕ್ ಸ್ಕೂಟರ್ ಗಳ ಸಹ ಅಭಿವೃದ್ಧಿಯಾಗುತ್ತಿದ್ದು, ಪ್ರತಿ ಚಾರ್ಜಿಂಗ್ ಗೆ ಅತಿ ಹೆಚ್ಚು ಮೈಲೇಜ್ ನೀಡಬಲ್ಲ ಐಷಾರಾಮಿ ವೈಶಿಷ್ಟ್ಯತೆಯ ಸ್ಕೂಟರ್ ಮಾದರಿಗಳು ಇವಾಗಿವೆ. ಇನ್ನು ಹೊಸ ಸ್ಕೂಟರ್ ಗಳು ಬೆಲೆಯ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಿಲ್ಲವಾದರೂ ಯುರೋಪಿನಲ್ಲಿ 2018ರ ಅಂತ್ಯಕ್ಕೆ ಮಾರಾಟ ಪ್ರಕ್ರಿಯೆ ಆರಂಭವಾಗಲಿದ್ದು, ಇವು ಭಾರತದಲ್ಲಿ 2019ರ ಆರಂಭದಲ್ಲಿ ಖರೀದಿಗೆ ಲಭ್ಯವಾಗುವ ನಿರೀಕ್ಷೆಯಿವೆ.