ಬೆಂಗಳೂರಿಗರ ಗಮನಕ್ಕೆ : ಆಸ್ತಿ ತೆರಿಗೆ ಪಾವತಿಗೆ ಜು.31 ಕೊನೆಯ ದಿನ |BBMP TAX | Kannada Dunia | Kannada News | Karnataka News
11-06-2024 3:36PM IST
/
No Comments /
Posted In: Karnataka, Latest News, Live News
ಬೆಂಗಳೂರು : ಆಸ್ತಿ ತೆರಿಗೆಯು ಬಿಬಿಎಂಪಿಯ ಆದಾಯದ ಪ್ರಾಥಮಿಕ ಮೂಲವಾಗಿದ್ದು, ಇದು ನಮ್ಮ ನಗರದ ಕಾರ್ಯಾಚರಣೆಯನ್ನು ನೇರವಾಗಿ ಸಮರ್ಥಿಸುತ್ತದೆ. ಸುಮಾರು 4 ಲಕ್ಷ ನಾಗರಿಕರು ರೂ.1000 ಕೋಟಿಗಳಷ್ಟು ಆಸ್ತಿತೆರಿಗೆಯನ್ನು ಪಾವತಿಸದಿರುವುದು ನಮ್ಮ ಗಮನಕ್ಕೆ ಬಂದಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಇಂದು ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್ ಇದಕ್ಕಾಗಿ ಕರ್ನಾಟಕ ಸರ್ಕಾರದ ಐತಿಹಾಸಿಕ ನಿರ್ಣಯ ತೆಗೆದುಕೊಂಡು ಒಂದು ಬಾರಿ ಪರಿಹಾರ ಯೋಜನೆಯನ್ನು (OTS) ಪರಿಚಯಿಸಿದೆ. ಇದರ ಅಡಿಯಲ್ಲಿ ಆಸ್ತಿ ತೆರಿಗೆಯ ಬಾಕಿಯ ಮೇಲೆ ಪಾವತಿಸಬೇಕಾದ ಬಡ್ಡಿಯನ್ನು ಸಂಪೂರ್ಣವಾಗಿ ಮನ್ನಾ ಮಾಡಲಾಗಿದೆ ಮತ್ತು ದಂಡವನ್ನು ಅರ್ಧಕ್ಕೆ ಇಳಿಸಲಾಗಿದೆ.
ಈ ಸುವರ್ಣಾವಕಾಶವು 31ನೇ ಜುಲೈ 2024 ರಂದು ಕೊನೆಗೊಳ್ಳಲಿದೆ. ಜೀವಮಾನದಲ್ಲಿ ಒಮ್ಮೆ ಮಾತ್ರ ಈ ಯೋಜನೆಯ ಅವಕಾಶವಿದ್ದು, ಇದರ ವಿಸ್ತರಣೆ ಇರುವುದಿಲ್ಲ. ಇಲ್ಲಿಯವರೆಗೆ 4 ಲಕ್ಷ ಆಸ್ತಿವಾರಸುದಾರರ ಪೈಕಿ ಸುಮಾರು 50000 ಜನರು ಮಾತ್ರ ಈ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ. ಈ ಅವಕಾಶವನ್ನು ಬಳಸಿಕೊಂಡು ನಿಮ್ಮ ಸ್ವತ್ತಿನ ಬಾಕಿ ಆಸ್ತಿತೆರಿಗೆಯನ್ನು ಪಾವತಿಸಬೇಕೆಂದು ಕೋರುತ್ತೇನೆ. ಬಿಬಿಎಂಪಿ ಕಾಯ್ದೆಯಲ್ಲಿ ಆಸ್ತಿತೆರಿಗೆ ಬಾಕಿ ವಸೂಲಾತಿಗೆ ಅವಕಾಶವಿದೆ. ಆದಾಗ್ಯೂ, ಒಟಿಎಸ್ ನಾಗರಿಕರಿಗೆ ಸಹಾಯ ಮಾಡಲು ನಮ್ಮ ಸರ್ಕಾರ ಮತ್ತು ಬಿಬಿಎಂಪಿಯೂ ಜೊತೆಯಾಗಿ ಕಾರ್ಯನಿರ್ವಹಿಸಲಿದೆ.
ಕರ್ನಾಟಕ ಸರ್ಕಾರವು ಬೆಂಗಳೂರು ನಗರದಲ್ಲಿ (1) ನಾಗರಿಕ ಸ್ವಯಂ ಘೋಷಣೆ ಆಧಾರಿತ ತಾತ್ಕಾಲಿಕ ಆಸ್ತಿ ತೆರಿಗೆ ಸಂಖ್ಯೆ (ii) ನಾಗರಿಕ ಸ್ನೇಹಿ ಸಹಾಯ ಅಪ್ಲಿಕೇಶನ್ (iii) ನಮ್ಮ ಲೇಕ್ ಮೊಬೈಲ್ ಅಪ್ಲಿಕೇಶನ್ (iv) ನಮ್ಮ ಪಾರ್ಕ್ ಮೊಬೈಲ್ನಂತಹ ನಾಗರಿಕ ಸ್ನೇಹಿ ಸೇರಿದಂತೆ ಹಲವು ಹೊಸದಾದ ಉಪಕ್ರಮಗಳನ್ನು ಪರಿಚಯಿಸಿದೆ. ಈ ರೀತಿಯ ಇನ್ನು ಹೆಚ್ಚಿನ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೆ ತರಲು ನಾವು ಬದ್ಧರಾಗಿದ್ದೇವೆ. ನಾಗರಿಕರು https://bbmptax.karnataka.gov.in ಮೂಲಕ ಆನ್ಲೈನ್ ನಲ್ಲಿ ಆಸ್ತಿತೆರಿಗೆಯನ್ನು ಸುಲಭವಾಗಿ ಪಾವತಿಸಬಹುದು. ಒಟಿಎಸ್ ಪ್ರಕಾರ ಆಸ್ತಿ ತೆರಿಗೆ ಬಾಕಿಗಳನ್ನು ಈಗಾಗಲೇ ಕಡಿಮೆ ಮಾಡಲಾಗಿದ್ದು, ಆಗಸ್ಟ್ 1, 2024 ರಿಂದ ಹೆಚ್ಚಾಗಲಿದೆ. ನಮ್ಮ ಬೆಂಗಳೂರು ನಗರದ ಅಭಿವೃದ್ಧಿಗಾಗಿ ಸಮಸ್ತ ನಾಗರಿಕರು ಕೈ ಜೋಡಿಸಬೇಕೆಂದು ಮನವಿ ಮಾಡುತ್ತೇನೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.