ಆಫ್ಲೈನ್ ಫೀಚರ್, ಎಐ ತಂತ್ರಜ್ಞಾನ ಸೇರಿದಂತೆ ಯುಪಿಐ ಪಾವತಿ ವ್ಯವಸ್ಥೆಯಲ್ಲಿ 3 ಗಮನಾರ್ಹ ಫೀಚರ್ ಘೋಷಿಸಿದ ಆರ್ಬಿಐ – Kannada News | AI Technology, Offline Payment, RBI Announce New Features to revolutionize UPI Payment System
UPI New Features: ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಅವರು ಯುಪಿಐ ಪಾವತಿ ವ್ಯವಸ್ಥೆಯಲ್ಲಿ ಕ್ರಾಂತಿಕಾರಿಕ ಎನಿಸುವ ಹೊಸ ಫೀಚರ್ಗಳನ್ನು ಘೋಷಸಿದ್ದಾರೆ. ಇದರಲ್ಲಿ ಯುಪಿಐ ಲೈಟ್ ಅನ್ನು ಆಫ್ಲೈನ್ನಲ್ಲೂ ಬಳಸುವುದು ಹಾಗೂ ಯುಪಿಐ ವಹಿವಾಟಿನಲ್ಲಿ ಎಐ ತಂತ್ರಜ್ಞಾನ ಬಳಸುವುದೂ ಸೇರಿವೆ.
ನವದೆಹಲಿ, ಆಗಸ್ಟ್ 10: ಯುಪಿಐ ಪಾವತಿ ವ್ಯವಸ್ಥೆಯಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನದ (AI Technology) ಅಳವಡಿಕೆ ಸೇರಿದಂತೆ ಮೂರು ಹೊಸ ಅಂಶಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ ಪ್ರಕಟಿಸಿದೆ. ಆಗಸ್ಟ್ 8ರಿಂದ 10ರವರೆಗೆ 3 ದಿನಗಳ ಕಾಲ ನಡೆದ ಆರ್ಬಿಐನ ಎಂಪಿಸಿ ಸಭೆಯಲ್ಲಿ ಯುಪಿಐ ಬಲಪಡಿಸುವ ನಿಟ್ಟಿನಲ್ಲಿ ಹೊಸ ಫೀಚರ್ಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ. ಇಂದು (ಆಗಸ್ಟ್ 10) ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಈ ವಿಚಾರವನ್ನು ಪ್ರಕಟಿಸಿದ್ದಾರೆ. ಯುಪಿಐ ಪಾವತಿಯಲ್ಲಿ ಎಐ ತಂತ್ರಜ್ಞಾನದ ವ್ಯವಸ್ಥೆ, ಯುಪಿಐ ಲೈಟ್ನ ಆಫ್ಲೈನ್ ಬಳಕೆ ಹಾಗೂ ಯುಪಿಐ ಲೈಟ್ನ ವಹಿವಾಟು ಮಿತಿ ಹೆಚ್ಚಳದ ನಿರ್ಧಾರಗಳನ್ನು ಕೈಗೊಳ್ಳಲಾಗಿರುವುದು ತಿಳಿದುಬಂದಿದೆ. ಈ ಮೂರು ಅಂಶಗಳು ಯುಪಿಐ ಪಾವತಿ ವ್ಯವಸ್ಥೆ ಹಾಗೂ ಯುಪಿಐ ಲೈಟ್ನ ಸ್ವರೂಪದಲ್ಲಿ ಗಮನಾರ್ಹ ಬದಲಾವಣೆ ತರುವ ನಿರೀಕ್ಷೆ ಇದೆ. ಜನಸಾಮಾನ್ಯರ ಹಣಕಾಸು ವಹಿವಾಟು ಕಾರ್ಯವೂ ಇನ್ನಷ್ಟು ಸುಗಮಗೊಳ್ಳಲಿದೆ.
ಯುಪಿಐ ಲೈಟ್ನ ಒಂದು ವಹಿವಾಟು ಮಿತಿ 500 ರೂಗೆ ಹೆಚ್ಚಳ
ಯುಪಿಐ ಲೈಟ್ ಫೀಚರ್ ಬಗ್ಗೆ ನಿಮಗೆ ಗೊತ್ತಿರಬಹುದು. ಎನ್ಪಿಸಿಐ ಅಭಿವೃದ್ಧಿಪಡಿಸಿರುವ ಯುಪಿಐ ಲೈಟ್ನಲ್ಲಿ ಸಣ್ಣ ಮೊತ್ತದ ವಹಿವಾಟು ನಡೆಸಬಹುದು. 200 ರೂವರೆಗಿನ ಮೊತ್ತದ ವಹಿವಾಟನ್ನು ಯುಪಿಐ ಲೈಟ್ ಮೂಲಕ ಮಾಡಬಹುದು. ಈಗ ಈ ಮಿತಿಯನ್ನು 500 ರೂಗೆ ಏರಿಸಲಾಗಿದೆ. ಅಂದರೆ ನೀವು ವರ್ತಕರಿಗೆ 500 ರೂ ಒಳಗಿನ ಹಣದ ಪಾವತಿಯನ್ನು ಯುಪಿಐ ಲೈಟ್ ಮೂಲಕ ಮಾಡಬಹುದು. ಆದರೆ, ಯುಪಿಐ ಲೈಟ್ನ ಖಾತೆಯಲ್ಲಿ ಇರಿಸಬಹುದಾದ ಗರಿಷ್ಠ ಹಣದ ಮಿತಿ 2,000 ರೂನಲ್ಲೇ ಮುಂದುವರಿಯುತ್ತದೆ.
ಸದ್ಯ, ಭೀಮ್ (BHIM), ಪೇಟಿಎಂ, ಫೋನ್ ಪೇ, ಗೂಗಲ್ ಪೇ ಆ್ಯಪ್ಗಳಲ್ಲಿ ಯುಪಿಐ ಲೈಟ್ ಫೀಚರ್ ಇದೆ.
ಆಫ್ಲೈನ್ ಯುಪಿಐ ಪೇಮೆಂಟ್
ಯುಪಿಐ ಲೈಟ್ ಫೀಚರ್ ಅನ್ನು ಆರ್ಬಿಐ ಗಂಭೀರವಾಗಿ ಪರಿಗಣಿಸಿದಂತಿದೆ. ಇಂಟರ್ನೆಟ್ ಇಲ್ಲದೆಯೂ ಯುಪಿಐ ಲೈಟ್ ಮೂಲಕ ಹಣದ ಪಾವತಿ ಸಾಧ್ಯವಾಗುವಂತೆ ತಂತ್ರಜ್ಞಾನ ಅಳವಡಿಸಲಾಗುತ್ತಿದೆ. ನಿಯರ್ ಫೀಲ್ಡ್ ಕಮ್ಯೂನಿಕೇಶನ್ (NFC) ತಂತ್ರಜ್ಞಾನದ ಸಹಾಯದಿಂದ ಆಫ್ಲೈನ್ನಲ್ಲೂ ಹಣದ ಪಾವತಿ ಮಾಡಬಹುದು. ಇಂಟರ್ನೆಟ್ ಸಂಪರ್ಕ ದುರ್ಬಲ ಇದ್ದಾಗ, ಅಥವಾ ಇಂಟರ್ನೆಟ್ ಸಂಪರ್ಕವೇ ಇಲ್ಲದಿದ್ದಾಗ ಹೆಚ್ಚು ರಗಳೆ ಇಲ್ಲದೇ ಹಣ ಪಾವತಿ ಮಾಡಬಹುದು. ಯುಪಿಐ ಲೈಟ್ನಲ್ಲಿ ಈ ಎನ್ಎಫ್ಸಿ ತಂತ್ರಜ್ಞಾನದ ಅಳವಡಿಕೆಯಾಗಲಿದೆ.
ಯುಪಿಐನಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನ ಅಳವಡಿಕೆ
ಯುಪಿಐನಲ್ಲಿ ಸಂವಾದನೀಯ ಪಾವತಿ ಅಥವಾ ಕಾನ್ವರ್ಸೇಶನಲ್ ಪೇಮೆಂಟ್ಸ್ ಎಂಬ ಹೊಸ ಫೀಚರ್ ಅಳವಡಿಸಲು ಆರ್ಬಿಐ ಯೋಜಿಸಿದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಶಕ್ತಿ ಇರುವ ಸಿಸ್ಟಂ ಸಹಾಯದಿಂದ ಸಂವಾದದ ಮೂಲಕ ಹಣದ ವಹಿವಾಟು ನಡೆಸಲು ಅನುವು ಮಾಡಿಕೊಡುತ್ತದೆ ಈ ಫೀಚರ್.
ಸ್ಮಾರ್ಟ್ ಫೋನ್ ಮಾತ್ರವಲ್ಲದೇ ಫೀಚರ್ ಫೋನ್ನಲ್ಲೂ ಇದು ಲಭ್ಯ ಇರಲಿದೆ. ಆರಂಭಿಕ ಪ್ರಯೋಗದಲ್ಲಿ ಇದು ಹಿಂದಿ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಸಂವಾದಕ್ಕೆ ಅವಕಾಶ ಇರುತ್ತದೆ. ಮುಂಬರುವ ದಿನಗಳಲ್ಲಿ ಕನ್ನಡವೂ ಸೇರಿದಂತೆ ವಿವಿಧ ಭಾರತೀಯ ಭಾಷೆಗಳಲ್ಲೂ ಇದರ ಸೇವೆ ಲಭ್ಯ ಇರುತ್ತದೆ ಎಂದು ಆರ್ಬಿಐ ಹೇಳಿದೆ.
ಹಿರಿಯ ನಾಗರಿಕರು, ವಿಶೇಷ ಚೇತನದ ವ್ಯಕ್ತಿಗಳಿಗೆ ಇದು ಬಹಳ ಉಪಯೋಗಕ್ಕೆ ಬರಬಹುದು.