EBM News Kannada
Leading News Portal in Kannada

Explainer: ಜಗತ್ತು ಹಣದುಬ್ಬರದಿಂದ ತತ್ತರಿಸಿದರೆ ಚೀನಾಗೆ ಹಣದುಬ್ಬರಕುಸಿತದ ತಲೆನೋವು; ಏನಿದು ಡೀಫ್ಲೇಶನ್? ಆರ್ಥಿಕತೆಯ ಮೇಲೇನು ಪರಿಣಾಮ? – Kannada News | China Faces Deflation Problem, Know The Problems Of Deflation and Its Effects on Economy

0


China Deflation Problem: ಚೀನಾ ದೇಶದಲ್ಲಿ ಜುಲೈನಲ್ಲಿ ಹಣದುಬ್ಬರ ಮೈನಸ್​ಗೆ ಹೋಗಿದೆ. 2021ರಿಂದ ಮೊದಲ ಬಾರಿಗೆ ಚೀನಾದಲ್ಲಿ ಇಂಥ ಸ್ಥಿತಿ ಇದೆ. ಹಣದುಬ್ಬರ ಹೆಚ್ಚಾದರೆ ಸಮಸ್ಯೆಯಾಗುವಂತೆ, ಹಣದುಬ್ಬರ ಮೈನಸ್​ಗೆ ಹೋದರೂ ಆರ್ಥಿಕತೆಗೆ ಹಿನ್ನಡೆಯಾಗುತ್ತದೆ.

Explainer: ಜಗತ್ತು ಹಣದುಬ್ಬರದಿಂದ ತತ್ತರಿಸಿದರೆ ಚೀನಾಗೆ ಹಣದುಬ್ಬರಕುಸಿತದ ತಲೆನೋವು; ಏನಿದು ಡೀಫ್ಲೇಶನ್? ಆರ್ಥಿಕತೆಯ ಮೇಲೇನು ಪರಿಣಾಮ?

ಚೀನೀ ವ್ಯಕ್ತಿಯ ಸಾಂದರ್ಭಿಕ ಚಿತ್ರ

Image Credit source: Photo by zhang kaiyv: https://www.pexels.com/photo/man-working-inside-the-kitchen-3603453/

ಬೀಜಿಂಗ್, ಆಗಸ್ಟ್ 9: ವಿಶ್ವದ ಹಲವು ದೇಶಗಳು ಹಣದುಬ್ಬರದಿಂದ (Inflation) ಬಳಲುತ್ತಿವೆ. ಬಡಬಗ್ಗರಿಗೆ ಬೆಲೆ ಏರಿಕೆಯ ಬಿಸಿ ಚಾಟಿ ಏಟಿನಂತೆ ಭಾರಿಸುತ್ತಿದೆ. ಕೆಲ ರಾಷ್ಟ್ರಗಳಲ್ಲಿ ಹಣಕುಸಿತ ಅಥವಾ ಡೀಫ್ಲೇಷನ್ ಪರಿಸ್ಥಿತಿಗೆ ಸಿಲುಕಿವೆ. ಈ ಪಟ್ಟಿಗೆ ಚೀನಾ ಸೇರ್ಪಡೆಯಾಗಿದೆ. ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆಯ ದೇಶವಾಗಿರುವ ಚೀನಾದಲ್ಲಿ ಈಗ ಹಿಮ್ಮುಖ ಹಣದುಬ್ಬರ (Deflation) ಎರಗಿದೆ. ಹಣದುಬ್ಬರದ ಪ್ರಮುಖ ಮಾನದಂಡವಾಗಿರುವ ಗ್ರಾಹಕ ಬೆಲೆ ಅನುಸೂಚಿ (CPI- Consumer Price Index) ಜುಲೈ ತಿಂಗಳಲ್ಲಿ 30 ಪ್ರತಿಶತ ಅಂಕಗಳಷ್ಟು ಕುಸಿದಿದೆ. ಇನ್ನು, ಉತ್ಪಾದಕ ಬೆಲೆ ಅನುಸೂಚಿ ಮೈನಸ್ 4.4 ಪ್ರತಿಶತಕ್ಕೆ ಕುಸಿದಿದೆ. ಅಂದರೆ ಚೀನಾದಲ್ಲಿ ಸರಾಸರಿ ಬೆಲೆ ಕುಸಿತ ಕಂಡಿದೆ.

2021ರ ಫೆಬ್ರುವರಿಯಲ್ಲಿ ಚೀನಾದಲ್ಲಿ ಬೆಲೆಗಳು ಮೈನಸ್ ಸ್ಥಿತಿಗೆ ಜಾರಿದ್ದವು. ಅದಾದ ಬಳಿಕ ಈಗಲೇ ಈ ಪರಿಸ್ಥಿತಿ ಬಂದಿರುವುದು. ಚೀನಾದಲ್ಲಿ ಕೋವಿಡ್ ಸಾಂಕ್ರಾಮಿಕ ಪರಿಸ್ಥಿತಿ ಬಂದಾಗಿನಿಂದಲೂ ಹಣದುಬ್ಬರ ಬಹಳ ಕಡಿಮೆ ಮಟ್ಟದಲ್ಲೇ ಇದೆ. ಉತ್ಪನ್ನಗಳ ಸಂಗ್ರಹಕ್ಕೂ ಅವುಗಳಿಗೆ ಇರುವ ಬೇಡಿಕೆಗೂ ಹೊಂದಿಕೆಯಾಗದ ಪರಿಣಾಮವು ಚೀನಾವನ್ನು ಈ ವಿಚಿತ್ರ ಸ್ಥಿತಿಗೆ ನೂಕಿದೆ. ಲಾಕ್ ಡೌನ್ ಇತ್ಯಾದಿ ಎಲ್ಲವೂ ತೆರವುಗೊಂಡು ಸಹಜ ಸ್ಥಿತಿಗೆ ಮರಳಿದ ಬಳಿಕ ದೇಶದಲ್ಲಿ ಜನರು ಖರೀದಿ ಭರಾಟೆಗೆ ಇಳಿದು, ಅನುಭೋಗ ಹೆಚ್ಚಬಹುದು ಎಂದು ಸರ್ಕಾರ ಹಾಗೂ ಅಲ್ಲಿಯ ಉದ್ಯಮ ವಲಯ ಇರಿಸಿದ್ದ ನಿರೀಕ್ಷೆ ಹುಸಿಯಾಗಿದೆ.

ಉತ್ಪನ್ನಗಳಿಗೆ ಬೇಡಿಕೆ ಕೊರತೆಯಿಂದ ಉದ್ದಿಮೆಗಳು ತಮ್ಮ ಉತ್ಪನ್ನಗಳ ಬೆಲೆ ಕಡಿತಗೊಳಿಸುತ್ತಿವೆ. ಆದರೂ ನಿರೀಕ್ಷಿತ ವಹಿವಾಟುಗಳು ನಡೆಯುತ್ತಿಲ್ಲ. ಚೀನಾದಲ್ಲಿ ಟೆಸ್ಲಾ ಸಂಸ್ಥೆ ತನ್ನ ಕಾರು ಬೆಲೆ ಇಳಿಸಿ ಆಟೊಮೊಬೈಲ್ ಉದ್ಯಮದಲ್ಲಿ ಬೆಲೆ ಸಮರಕ್ಕೆ ನಾಂದಿಹಾಡಿತು. ಪರಿಣಾಮವಾಗಿ ಚೀನಾದ ವಾಹನ ಕಂಪನಿಗಳು ಸಾಲುಸಾಲಾಗಿ ಬೆಲೆಕಡಿತ ಮಾಡುತ್ತಿವೆ. ಇವೆಲ್ಲವೂ ಡೀಫ್ಲೇಶನ್ ಸ್ಥಿತಿಗೆ ದೇಶವನ್ನು ನೂಕಿವೆ.

ಇನ್​ಫ್ಲೇಶನ್ ಎಂದರೇನು?

ಇನ್​ಫ್ಲೇಶನ್ ಅಥವಾ ಹಣದುಬ್ಬರ ಎಂದರೆ ಒಂದು ನಿರ್ದಿಷ್ಟ ಅಂತರದಲ್ಲಿ ಗ್ರಾಹಕ ವಸ್ತುಗಳ ಬೆಲೆ ಎಷ್ಟು ಏರಿದೆ ಎಂಬ ಲೆಕ್ಕ. ಆಹಾರವಸ್ತು, ಪೆಟ್ರೋಲ್ ಇತ್ಯಾದಿ ಜನರು ಸಾಮಾನ್ಯವಾಗಿ ಉಪಯೋಗಿಸುವ ವಸ್ತುಗಳ ಬೆಲೆಗಳ ಸರಾಸರಿಯನ್ನು ಇಲ್ಲಿ ಪರಿಗಣಿಸಿ ಗ್ರಾಹಕ ಬೆಲೆ ಅನುಸೂಚಿ ಎಂಬ ಪಟ್ಟಿ ಮಾಡಲಾಗುತ್ತದೆ. 2022ರ ಜುಲೈನಲ್ಲಿ ಸಿಪಿಐ ಎಷ್ಟಿತ್ತು, 2023ರ ಜುಲೈನಲ್ಲಿ ಸಿಪಿಐ ಎಷ್ಟಿದೆ, ಅದರ ನಡುವಿನ ಅಂತರ ಎಷ್ಟಿದೆ ಎಂಬುದರ ಹಣದುಬ್ಬರ ಎಷ್ಟಿದೆ ಅಥವಾ ಡೀಫ್ಲೇಶನ್ ಎಷ್ಟಿದೆ ಎಂಬುದನ್ನು ಅಳೆಯಲಾಗುತ್ತದೆ. ಇದರ ಸಂಖ್ಯೆ ಶೂನ್ಯಕ್ಕಿಂತ ಹೆಚ್ಚಿದ್ದರೆ ಅದು ಹಣದುಬ್ಬರ. ಇದು ಮೈನಸ್ ಇದ್ದರೆ ಅದು ಡೀಫ್ಲೇಶನ್ ಎನಿಸುತ್ತದೆ.

ಹಣದುಬ್ಬರ ಅಗತ್ಯವಾ?

ವ್ಯಾಪಾರ ಅಥವಾ ಉದ್ಯಮಗಳು ಆರೋಗ್ಯವಾಗಿರಬೇಕಾದರೆ ಹಣದುಬ್ಬರ ಆರೋಗ್ಯಕರ ಮಟ್ಟದಲ್ಲಿರಬೇಕು. ಯಾಕೆಂದರೆ ಉತ್ಪನ್ನ ತಯಾರಿಸುವ ಸಂಸ್ಥೆಗಳಿಗೆ ಅದು ಲಾಭದಾಯಕವಾಗಬೇಕಾದರೆ ಬೆಲೆ ಹೆಚ್ಚಳ ಆಗಲೇ ಬೇಕು. ಇಲ್ಲವಾದರೆ ಉದ್ಯಮ ನಷ್ಟ ಹೊಂದುತ್ತದೆ. ಹಣದುಬ್ಬರ ಶೇ. 2ರಿಂದ 5ರ ಆಸುಪಾಸಿನಲ್ಲಿದ್ದರೆ ಅದು ಉತ್ತಮ ಸ್ಥಿತಿ ಎಂದು ಭಾವಿಸಲಾಗಿದೆ. ಹಣದುಬ್ಬರ ತೀರಾ ಹೆಚ್ಚಾದರೆ ಜನಸಾಮಾನ್ಯರು ಖರೀದಿಗೆ ಮುಂದಾಗುವುದಿಲ್ಲ. ಇದೂ ಕೂಡ ಆರ್ಥಿಕ ಅನಾರೋಗ್ಯಕ್ಕೆ ಎಡೆ ಮಾಡಿಕೊಡುತ್ತದೆ.

ಡೀಫ್ಲೇಶನ್ ಆದರೆ ಏನು ಸಮಸ್ಯೆ?

ಬ್ಲಡ್ ಪ್ರೆಷರ್​ನಲ್ಲಿ ಹೈಬಿಪಿ ಮತ್ತು ಲೋಬಿಪಿ ಎರಡೂ ಕೂಡ ಡೇಂಜರಸ್ ಎನ್ನಲಾಗುವಂತೆ ಹಣದುಬ್ಬರ ವಿಷಯದಲ್ಲಿ ಇನ್​ಫ್ಲೇಷನ್ ಮತ್ತು ಡೀಫ್ಲೇಶನ್ ಎರಡೂ ಅಪಾಯಕಾರಿಯೇ. ನಿರ್ದಿಷ್ಟ ಅವಧಿಯಲ್ಲಿ ಗ್ರಾಹಕ ಬೆಲೆ ಅನುಸೂಚಿಯಲ್ಲಿ ಕುಸಿತ ಉಂಟಾದರೆ ಅದು ಡೀಫ್ಲೇಶನ್ ಎನಿಸುತ್ತದೆ. ಇದರಿಂದ ಗ್ರಾಹಕರ ಖರೀದಿ ಸಾಮರ್ಥ್ಯ ಹೆಚ್ಚುತ್ತದಾದರೂ ಉದ್ಯಮವಲಯ ಲಾಭ ಇಲ್ಲದೇ ಕಂಗಾಲಾಗುತ್ತದೆ. ನಷ್ಟಕ್ಕೆ ಸಿಲುಕುತ್ತದೆ. ಮೂರ್ನಾಲ್ಕು ತಿಂಗಳು ಇದೇ ಸ್ಥಿತಿ ಮುಂದುವರಿದರೆ ಆರ್ಥಿಕ ಹಿಂಜರಿತದ ಪರಿಸ್ಥಿತಿಗೆ ಎಡೆಯಾಗುತ್ತದೆ.

ಬೇಡಿಕೆಯ ಕೊರತೆ, ಮಾರುಕಟ್ಟೆ ಕ್ಷಮತೆಯ ಕೊರತೆ ಇತ್ಯಾದಿ ನಕಾರಾತ್ಮಕ ಕಾರಣಳಿಂದ ಡೀಫ್ಲೇಶನ್ ಆಗಿದ್ದರೆ ಅದು ಆರ್ಥಿಕ ಅನಾರೋಗ್ಯದ ಸೂಚಕವಾಗಿರುತ್ತದೆ. ಇನ್ನು, ತಂತ್ರಜ್ಞಾನ ಅಭಿವೃದ್ಧಿ ಕಾರಣಕ್ಕೆ ಬೆಲೆಗಳು ಕಡಿಮೆ ಆಗಿ ಆ ಮೂಲಕ ಡೀಫ್ಲೇಶನ್ ಆಗಿದ್ದಲ್ಲಿ, ಅದು ಉತ್ತಮ ಆರ್ಥಿಕ ಭವಿಷ್ಯಕ್ಕೆ ಸೂಚಕವೆಂದು ತಜ್ಞರು ಭಾವಿಸುತ್ತಾರೆ.

Published On – 12:23 pm, Wed, 9 August 23

ತಾಜಾ ಸುದ್ದಿ

Leave A Reply

Your email address will not be published.