ಜೊಮಾಟೋದಲ್ಲಿ ಪ್ರತೀ ಫುಡ್ ಆರ್ಡರ್ ಮೇಲೂ 2 ರೂ ಪ್ಲಾಟ್ಫಾರ್ಮ್ ಶುಲ್ಕ; ಏನು ಕಾರಣ? – Kannada News | Zomato Charging Rs 2 Platform Fee, Know Why food delivery App Taking Additional Money
Zomato Platform Fee: ಫುಡ್ ಡೆಲಿವರಿ ಆ್ಯಪ್ ಜೊಮಾಟೋ ತನ್ನ ಗ್ರಾಹಕರು ಬುಕ್ ಮಾಡುವ ಪ್ರತಿಯೊಂದು ಫುಡ್ ಆರ್ಡರ್ ಮೇಲೂ 2 ರೂ ಹೆಚ್ಚುವರಿ ಪ್ಲಾಟ್ಫಾರ್ಮ್ ಶುಲ್ಕ ವಿಧಿಸುತ್ತಿದೆ. ಇದು ಕೆಲ ಆಯ್ದ ಸ್ಥಳಗಳಲ್ಲಿ ಪ್ರಾಯೋಗಿಕವಾಗಿ ಚಾಲನೆಯಲ್ಲಿದೆ. ಏಪ್ರಿಲ್ ತಿಂಗಳಲ್ಲಿ ಸ್ವಿಗ್ಗಿ ಈ ಪ್ರಯೋಗವನ್ನು ಮೊದಲು ಆರಂಭಿಸಿತ್ತು.
ಬೆಂಗಳೂರು, ಆಗಸ್ಟ್ 8: ಫೂಡ್ ಡೆಲಿವರಿ ಪ್ಲಾಟ್ಫಾರ್ಮ್ ಜೊಮಾಟೋ (Zomato) ತನ್ನ ಪ್ಲಾಟ್ಫಾರ್ಮ್ನಲ್ಲಿ ಗ್ರಾಹಕರು ಮಾಡುವ ಪ್ರತಿಯೊಂದು ಆರ್ಡರ್ಗೂ ಹೆಚ್ಚುವರಿ 2 ರೂ ಶುಲ್ಕ (platform fee) ವಿಧಿಸಲು ಆರಂಭಿಸಿದೆ. ಸದ್ಯ ಕೆಲವೇ ಆಯ್ದ ಸ್ಥಳಗಳಲ್ಲಿ ಪ್ರಾಯೋಗಿಕವಾಗಿ ಶುಲ್ಕ ಪಡೆಯಲಾಗುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲೆಡೆ ಈ ಶುಲ್ಕ ಅನ್ವಯ ಆಗಲಿದೆ. ಜೊಮಾಟೋ ಪ್ರತಿಸ್ಪರ್ಧಿ ಸ್ವಿಗ್ಗಿ (Swiggy) ನಾಲ್ಕು ತಿಂಗಳ ಹಿಂದೆಯೇ ಪ್ಲಾಟ್ಫಾರ್ಮ್ ಫೀ ಸಂಗ್ರಹಿಸಲು ಆರಂಭಿಸಿತ್ತು. ಈಗ ಜೊಮಾಟೋ ಕೂಡ ಅದೇ ಹಾದಿ ಹಿಡಿದಿದೆ.
ಪ್ಲಾಟ್ಫಾರ್ಮ್ ಶುಲ್ಕ ಹೇಗೆ ಅನ್ವಯ?
ಇಲ್ಲಿ ಜೊಮಾಟೋದಲ್ಲಿ ಆರ್ಡರ್ ಮೌಲ್ಯಕ್ಕೆ ಅನುಗುಣವಾಗಿ ಪ್ಲಾಟ್ಫಾರ್ಮ್ ಶುಲ್ಕದ ಸಂಗ್ರಹ ಆಗುವುದಿಲ್ಲ. ಎಷ್ಟೇ ಮೌಲ್ಯದ ಆರ್ಡರ್ ಆದರೂ ಶುಲ್ಕ ಹಣ 2 ಮಾತ್ರವೇ ಇರುತ್ತದೆ. ನೀವು 100 ರೂ ಮೊತ್ತದ ಆರ್ಡರ್ ಮಾಡಿದರೂ ಅಷ್ಟೇ ಶುಲ್ಕ, ಎರಡು ಸಾವಿರ ರೂ ಮೌಲ್ಯದ ಆರ್ಡರ್ಗೂ ಅಷ್ಟೇ ಶುಲ್ಕ ಇರುತ್ತದೆ.
ಆರ್ಡರ್ ಬುಕ್ ಮಾಡುವಾಗ ಗ್ರಾಹಕರಿಗೆ, ‘ಬಿಲ್ ಪಾವತಿಸಲು ಮತ್ತು ಜೊಮಾಟೋ ಚಾಲನೆಯಲ್ಲಿರಲು ಸಹಾಯವಾಗಿ’ ಈ ಪ್ಲಾಟ್ಫಾರ್ಮ್ ಫೀ ಪಡೆಯಲಾಗುತ್ತಿದೆ ಎಂದು ಜೊಮಾಟೋ ಪ್ರಾಮಾಣಿಕವಾಗಿ ಘೋಷಿಸಿದೆ.
ಸ್ವಿಗ್ಗಿ ಏಪ್ರಿಲ್ ತಿಂಗಳಲ್ಲಿ ಪ್ಲಾಟ್ಫಾರ್ಮ್ ಶುಲ್ಕ ವಿಧಿಸಲು ಆರಂಭಿಸಿತು. ಡೆಲಿವರಿ ಕ್ಷೇತ್ರ ಕಷ್ಟದಾಯಕವಾಗಿದೆ ಎಂಬ ಕಾರಣ ಕೊಟ್ಟಿತ್ತು ಸ್ವಿಗ್ಗಿ. ಆದರೆ ಅದು ಕೇವಲ ಫುಡ್ ಡೆಲಿವರಿಯ ಆರ್ಡರ್ಗಳಿಗೆ ಮಾತ್ರ ಅನ್ವಯ ಆಗುವ ಶುಲ್ಕ. ಸ್ವಿಗ್ಗಿಯ ಇತರ ಡೆಲಿವರಿ ಸರ್ವಿಸ್ ಆದ ಇನ್ಸ್ಟಾಮಾರ್ಟ್ಗೆ ಪ್ಲಾಟ್ಫಾರ್ಮ್ ಫೀ ಪಡೆಯಲಾಗುತ್ತಿಲ್ಲ.
ಅದೇ ರೀತಿ ಜೊಮಾಟೋ ಕೂಡ ಫುಡ್ ಡೆಲಿವರಿ ಆರ್ಡರ್ಗೆ ಮಾತ್ರವೇ 2 ರೂಗಳ ಪ್ಲಾಟ್ಫಾರ್ಮ್ ಫೀ ಪಡೆಯುತ್ತಿದೆ. ಅದರ ಬ್ಲಿಂಕಿಟ್ ಡೆಲಿವರಿ ಸೇವೆಗೆ ಈ ಶುಲ್ಕ ಇರುವುದಿಲ್ಲ.
ಮೊದಲ ಬಾರಿಗೆ ಲಾಭದ ಮುಖ ನೋಡಿದ ಜೊಮಾಟೋ
ಜೊಮಾಟೋ ಸಂಸ್ಥೆ 2023-24ರ ಮೊದಲ ತ್ರೈಮಾಸಿಕವಾದ ಏಪ್ರಿಲ್ನಿಂದ ಜೂನ್ವರೆಗಿನ ಅವಧಿಯಲ್ಲಿ 12 ಮಿಲಿಯನ್ ಡಾಲರ್ನಷ್ಟು (ಸುಮಾರು 100 ಕೋಟಿ ರೂ) ಲಾಭ ಪಡೆದಿದೆ. ಜೊಮಾಟೋ ಆರಂಭಗೊಂಡಂತಾಗಿನಿಂದ ಒಂದು ಕ್ವಾರ್ಟರ್ ಅವಧಿಯಲ್ಲಿ ಲಾಭ ಕಂಡಿದ್ದು ಇದೇ ಮೊದಲು. ಲಾಭದ ಜೊತೆಗೆ ಅದರ ಆದಾಯವೂ ಗಣನೀಯವಾಗಿ ವೃದ್ಧಿಸಿದೆ. ಕಳೆದ ವರ್ಷದ ಇದೇ ಕ್ವಾರ್ಟರ್ನಲ್ಲಿ ಜೊಮಾಟೋ 186 ಕೋಟಿ ರೂ ನಷ್ಟ ಅನುಭವಿಸಿತ್ತು. ಅದಕ್ಕೆ ಹೋಲಿಸಿದರೆ ಜೊಮಾಟೋ ವ್ಯವಹಾರ ಗಮನಾರ್ಹವಾಗಿ ಸುಧಾರಿಸಿದೆ.