ಮಾರುಕಟ್ಟೆ ಕುಸಿಯುತ್ತಿದೆಯಲ್ಲಾ..! ಮ್ಯೂಚುವಲ್ ಫಂಡ್ ಮೇಲೆ ಹಣ ಹಾಕಿ ಯೋಚಿಸುತ್ತಿದ್ದೀರಾ? ಇಲ್ಲಿದೆ ಟಿಪ್ಸ್ – Kannada News | Know What To To When Your Mutual Fund Making Loss
Mutual Fund tips: ಮ್ಯೂಚುವಲ್ ಫಂಡ್ ಮೇಲಿನ ಹೂಡಿಕೆಯಿಂದ ನಷ್ಟ ಆಗುತ್ತಿದೆ ಎಣಿಸಿದಲ್ಲಿ ಹಣವನ್ನು ಹಿಂಪಡೆಯುವುದು ಸರಿಯಾ? ಇಂಥ ಹಿನ್ನಡೆ ಸಂದರ್ಭದಲ್ಲಿ ನೀವು ಏನು ಮಾಡಬೇಕು ಎಂದು ತಜ್ಞರಿತ್ತ ಸಲಹೆಗಳು ಇಲ್ಲಿವೆ…
ಮ್ಯೂಚುವಲ್ ಫಂಡ್
ರೀಟೇಲ್ ಹೂಡಿಕೆದಾರರಿಗೆ ಮ್ಯೂಚುವಲ್ ಫಂಡ್ (Mutual Fund) ಫೇವರಿಟ್ ಸಾಧನವಾಗಿದೆ. ಎಫ್ಡಿ ಮತ್ತಿತರ ಉಳಿತಾಯ ಯೋಜನೆಗಳಲ್ಲಿ ಸಿಗುವುದಕ್ಕಿಂತ ಬಹಳ ಹೆಚ್ಚಿನ ಮಟ್ಟದಲ್ಲಿ ಆದಾಯ ಕೊಡಬಲ್ಲ ಮ್ಯೂಚುವಲ್ ಫಂಡ್ ತನ್ನ ಆಕರ್ಷಣೆ ಉಳಿಸಿಕೊಳ್ಳಲು ಯಶಸ್ವಿಯಾಗಿದೆ. ದೇಶದಲ್ಲಿ ನೂರಾರು ಮ್ಯೂಚುವಲ್ ಫಂಡ್ಗಳಿದ್ದು, ಪ್ರತಿಯೊಂದು ಕೂಡ ನಿರ್ದಿಷ್ಟ ವಲಯಗಳ ಕಂಪನಿಗಳ ಷೇರಿನ ಮೇಲೆ ಹೂಡಿಕೆ ಮಾಡುತ್ತವೆ. ಆ ಕಂಪನಿಯ ಷೇರುಗಳು ಬೆಳೆದಂತೆ ನಿಮ್ಮ ಆದಾಯವೂ ವೃದ್ಧಿಸುತ್ತದೆ. ಅವುಗಳ ಷೇರುಗಳು ಕುಸಿತದಂತೆ ನಿಮ್ಮ ಸಂಪತ್ತೂ ಅನುಗುಣವಾಗಿ ಕಡಿಮೆ ಆಗುತ್ತದೆ. ಇದು ಸಿಂಪಲ್ ಸೂತ್ರ. ಹೀಗಾಗಿ, ಮ್ಯೂಚುವಲ್ ಫಂಡ್ ಆದಾಯಕ್ಕೆ ಎಷ್ಟು ಆಕರ್ಷಕವೋ, ನಷ್ಟ ಸಾಧ್ಯತೆಯೂ ಇರುತ್ತದೆ.
ಮ್ಯೂಚುವಲ್ ಫಂಡ್ನಿಂದ ಹೂಡಿಕೆಯಾದ ಕಂಪನಿಗಳ ಷೇರುಗಳು ಕುಸಿಯತೊಡಗುತ್ತಿರುವಂತೆಯೇ ಆ ಮ್ಯುಚುವಲ್ ಫಂಡ್ನಲ್ಲಿ ಹಣ ಇರಿಸಿದ ಗ್ರಾಹಕರು ಕಂಗಾಲಾಗುವುದುಂಟು. ಕೆಲವರಂತೂ ತಮ್ಮ ಹಣವನ್ನು ಹಿಂಪಡೆದುಕೊಳ್ಳುವುದುಂಟು. ಇಂಥ ತರಾತುರಿ ಕ್ರಮ ತಪ್ಪು ಎಂಬುದು ತಜ್ಞರ ಅನಿಸಿಕೆ. ಮ್ಯೂಚುವಲ್ ಫಂಡ್ ಕುಸಿಯತೊಡಗಿದಾಗ ನಾವೇನು ಮಾಡಬೇಕು? ತಜ್ಞರು ಕೊಟ್ಟಿರುವ ಕೆಲ ಸಲಹೆಗಳು ಇಲ್ಲಿವೆ…
ಸಂಯಮ ಇರಲಿ: ಸಾಮಾನ್ಯವಾಗಿ ಮ್ಯೂಚುವಲ್ ಫಂಡ್ಗಳು ದೀರ್ಘಾವಧಿಯಲ್ಲಿ ಉತ್ತಮ ಲಾಭ ತರುತ್ತವೆ. ಒಂದು ಅಥವಾ ಎರಡು ವರ್ಷದ ರಿಟರ್ನ್ ಗಮನಿಸಿ ಮ್ಯೂಚುವಲ್ ಫಂಡ್ ಸಾಧನೆಯನ್ನು ನಿರ್ಧರಿಸಲು ಆಗುವುದಿಲ್ಲ. ಎಂಟತ್ತು ವರ್ಷಗಳಷ್ಟಾದರೂ ನೀವು ಕಾಲಾವಕಾಶ ಕೊಡಬೇಕು. ಅಲ್ಲಿಯವರೆಗೂ ಸಮಾಧಾನದಿಂದ ಇರುವುದು ಉತ್ತಮ.
ಆತುರವಾಗಿ ಹಣ ಹಿಂಪಡೆಯದಿರಿ: ಮ್ಯೂಚುವಲ್ ಫಂಡ್ನ ಮೌಲ್ಯ ಕಡಿಮೆ ಆದಾಗ ಮಾರಿ, ಅದರ ಮೌಲ್ಯ ಏರತೊಡಗಿದಾಗ ಮರಳಿ ಹೂಡಿಕೆ ಮಾಡುವವರಿದ್ದಾರೆ. ಇದು ಮೇಲ್ನೋಟಕ್ಕೆ ಚಾಣಾಕ್ಷ್ಯತನ ಎನಿಸಿದರೂ ವಾಸ್ತವವಾಗಿ ಸರಿಬರುವುದಿಲ್ಲ. ನೀವು ಮಾರಿದ ಬೆಲೆಗಿಂತ ಹೆಚ್ಚಿನ ಬೆಲೆಗೆ ಮರಳಿ ಖರೀದಿಸುವ ಸನ್ನಿವೇಶವೇ ಹೆಚ್ಚಿರುತ್ತದೆ.
ಹೋಲಿಕೆ ಮಾಡಿ: ನೀವು ಹೂಡಿಕೆ ಮಾಡಿದ ಮ್ಯೂಚುವಲ್ ಫಂಡ್ ನಿರೀಕ್ಷಿಸಿದಷ್ಟು ಮಟ್ಟದಲ್ಲಿ ಬೆಳೆಯುತ್ತಿಲ್ಲ ಎಂದರೆ, ಅಂಥದ್ದೇ ರೀತಿಯ ಇತರ ಪ್ರಮುಖ ಮ್ಯುಚುವಲ್ ಫಂಡ್ನೊಂದಿಗೆ ಹೋಲಿಕೆ ಮಾಡಿ. ನಿಮ್ಮದು ಸ್ಮಾಲ್ ಕ್ಯಾಪ್ ಫಂಡ್ ಆಗಿದ್ದರೆ ಅದೇ ಸ್ಮಾಲ್ ಕ್ಯಾಪ್ನದ್ದೇ ಬೇರೊಂದು ಮ್ಯುಚುವಲ್ ಫಂಡ್ನೊಂದಿಗೆ ಹೋಲಿಸಿ. ಎರಡರ ಮಧ್ಯೆ ಅಂಥದ್ದೇನು ವ್ಯತ್ಯಾಸ ಇಲ್ಲವಾದರೆ ಬದಲಾವಣೆ ಮಾಡುವ ಗೋಜಿಗೆ ಹೋಗಬೇಡಿ. ಒಂದು ವೇಳೆ ತೀರಾ ವ್ಯತ್ಯಾಸ ಇದ್ದಲ್ಲಿ ಮಾತ್ರ ಹೂಡಿಕೆ ಬದಲಿಸಲು ಯೋಚಿಸಬಹುದು.
ಹೂಡಿಕೆ ವಲಯದ ಬಗ್ಗೆ ತಿಳಿಯಿರಿ: ನೀವು ಯಾವುದಾದರೂ ವಲಯಕ್ಕೆ ಸೀಮಿತವಾದ ಮ್ಯೂಚುವಲ್ ಫಂಡ್ ಮೇಲೆ ಹೂಡಿಕೆ ಮಾಡಿದ್ದು, ಆ ಫಂಡ್ ನಷ್ಟ ಅನುಭವಿಸುತ್ತಿದ್ದಲ್ಲಿ, ಮೊದಲು ಆ ವಲಯದ ಬಗ್ಗೆ ಸಂಶೋಧನೆ ನಡೆಸಿ. ಪ್ರಸಕ್ತ ಆರ್ಥಿಕ ಸನ್ನಿವೇಶದಲ್ಲಿ ಆ ವಲಯದ ಆರೋಗ್ಯ ಹೇಗಿದೆ? ಭವಿಷ್ಯ ಹೇಗಿದೆ ಎಂಬುದನ್ನು ಅವಲೋಕಿಸಲು ಯತ್ನಿಸಿ. ತಾತ್ಕಾಲಿಕ ಹಿನ್ನಡೆಯ ಹೊರತಾಗಿಯೂ ಆ ವಲಯ ಮುಂದಿನ ದಿನಗಳಲ್ಲಿ ಬೆಳೆಯಬಲ್ಲುದು ಎನಿಸಿದರೆ ನಿಮ್ಮ ಹೂಡಿಕೆಯನ್ನು ಹಿಂಪಡೆಯಬೇಡಿ.
ಹೂಡಿಕೆ ವೈವಿಧ್ಯತೆ: ನಿಮ್ಮ ಹೂಡಿಕೆ ಶ್ರೇಣಿ ವೈವಿಧ್ಯತೆ ಹೊಂದಿರಲಿ. ಅಂದರೆ ವಿವಿಧ ಪ್ರಾಕಾರದ ಹೂಡಿಕೆ ಸಾಧನಗಳಲ್ಲಿ ನಿಮ್ಮ ಹಣ ತೊಡಗಿಸಿರಲಿ. ಉದಾಹರಣೆಗೆ ನೀವು ಈಕ್ವಿಟಿ ಫಂಡ್ಗಳಿಗೆ ಮಾತ್ರ ಸೀಮಿತರಾಗದೇ ಬೇರೆ ಡೆಟ್ ಫಂಡ್ ಇತ್ಯಾದಿ ಲಿಕ್ವಿಟ್ ಫಂಡ್ಗಳಲ್ಲೂ ಹೂಡಿಕೆ ಮಾಡಿ. ಈಕ್ವಿಟಿ ಫಂಡ್ಗಳಲ್ಲೂ ಕೂಡ ಸ್ಮಾಲ್ ಕ್ಯಾಪ್, ಮಿಡ್ ಕ್ಯಾಪ್ ಮತ್ತು ಲಾರ್ಜ್ ಕ್ಯಾಪ್, ಈ ಮೂರೂ ಫಂಡ್ಗಳಿಗೂ ನಿಮ್ಮ ಹೂಡಿಕೆ ವಿಸ್ತರಣೆ ಆಗಲಿ.
ಹಾಗೆಯೇ, ಚಿನ್ನ, ಎಫ್ಡಿ, ಪಿಪಿಎಫ್ ಇತ್ಯಾದಿಗಳಲ್ಲೂ ನೀವು ಹೂಡಿಕೆ ಮಾಡಬಹುದು. ಇದರಿಂದ ಷೇರು ಮಾರುಕಟ್ಟೆ ಅಲುಗಾಡಿದರೂ ಒಂದಷ್ಟು ಹೂಡಿಕೆಗಳು ಭದ್ರವಾಗಿರುತ್ತವೆ.