Multibagger: 10,000 ರೂ ಹೂಡಿಕೆ, 10 ವರ್ಷದಲ್ಲಿ 4 ಲಕ್ಷ ರೂ ಆದಾಯ; ಮಲ್ಟಿಬ್ಯಾಗರ್ ಆದ ಸೊನಾಟ ಸಾಫ್ಟ್ವೇರ್ – Kannada News | Sonata Software Becomes Multibagger From Past 10 Years Giving Over 4,300pc Returns
Sonata Software Share: ಬೆಂಗಳೂರು ಮೂಲದ ಸೊನಾಟ ಸಾಫ್ಟ್ವೇರ್ ಸಂಸ್ಥೆಯ ಷೇರುಮೌಲ್ಯ ಕಳೆದ 10 ವರ್ಷದಲ್ಲಿ ಅಗಾಧವಾಗಿ ವೃದ್ಧಿಸಿದೆ. 29 ರೂ ಇದ್ದ ಅದರ ಬೆಲೆ ಈಗ 1,000 ರೂಗೂ ಹೆಚ್ಚಾಗಿದೆ. ಈ ಮೂಲಕ ಹೂಡಿಕೆದಾರರ ಪಾಲಿಗೆ ಸೊನಾಟ ಸಾಫ್ಟ್ವೇರ್ ಮಲ್ಟಿಬ್ಯಾಗರ್ ಆಗಿ ಪರಿಣಮಿಸಿದೆ.
ಷೇರುಪೇಟೆಯಲ್ಲಿ ದೀರ್ಘಕಾಲೀನ ಹೂಡಿಕೆಯಲ್ಲಿ ನಷ್ಟದ ಸಾಧ್ಯತೆ ಕಡಿಮೆ. ಅದರಲ್ಲೂ ಉತ್ತಮ ಆದಾಯ ಮತ್ತು ಭವಿಷ್ಯ ಇರುವ ಮತ್ತು ಹಣಕಾಸು ಸ್ಥಿತಿ ಉತ್ತಮ ಇರುವ ಕಂಪನಿಯ ಷೇರಿನ ಮೇಲೆ ಹೂಡಿಕೆ ಮಾಡಿದರೆ ದೀರ್ಘಾವಧಿಯಲ್ಲಿ ಅದು ಮಲ್ಟಿಬ್ಯಾಗರ್ ಆಗಿ ಪರಿಣಮಿಸುವ ಸಾಧ್ಯತೆ ಹೆಚ್ಚಿರುತ್ತದೆ. ಅಂಥ ಕಂಪನಿಗಳಲ್ಲಿ ಸೊನಾಟ ಸಾಫ್ಟ್ವೇರ್ (Sonata Software) ಒಂದು. ಕಳೆದ 10 ವರ್ಷದಲ್ಲಿ ಇದರ ಷೇರುಬೆಲೆ ಶೇ. 4,300ರಷ್ಟು ಬೆಳೆದಿದೆ. ಅಂದರೆ ಇದರ ಹೂಡಿಕೆದಾರರ ಹಣ 10 ವರ್ಷದಲ್ಲಿ 43 ಪಟ್ಟು ಲಾಭ ಮಾಡಿದೆ.
ನಿದರ್ಶನಕ್ಕೆ ತಿಳಿಸುವುದಾದರೆ, 10 ವರ್ಷದ ಹಿಂದೆ ಯಾರಾದರೂ ಹೂಡಿಕೆದಾರರು ಸೊನಾಟ ಸಾಫ್ಟ್ವೇರ್ನ ಷೇರುಗಳ ಮೇಲೆ 10,000 ರೂನಷ್ಟು ಹೂಡಿಕೆ ಮಾಡಿದ್ದೇ ಆಗಿದ್ದರೆ ಇವತ್ತು ಅವರ ಷೇರುಸಂಪತ್ತು 4 ಕ್ಷ ರೂ ಆಗುತ್ತಿತ್ತು. ಅಷ್ಟು ಅಗಾಧವಾಗಿ ಸೊನಾಟ ಸಾಫ್ಟ್ವೇರ್ ಷೇರುಮೌಲ್ಯ ವೃದ್ಧಿಸಿದೆ.
ಬಿಎಸ್ಇ500 ಲಿಸ್ಟ್ನಲ್ಲಿರುವ ಸೊನಾಟ ಸಾಫ್ಟ್ವೇರ್ನ ಷೇರುಮೌಲ್ಯ ಕಳೆದ 5 ವರ್ಷದಿಂದೀಚೆ ಶೇ. 488ರಷ್ಟು ವೃದ್ಧಿಸಿದೆ. ಕಳೆದ 3 ವರ್ಷದಲ್ಲಿ ಶೇ. 250ರಷ್ಟು ಬೆಳೆದಿದೆ.
ಬೆಂಗಳೂರಿನಲ್ಲಿ ಮುಖ್ಯ ಕಚೇರಿ ಹೊಂದಿರುವ ಸೊನಾಟ ಸಾಫ್ಟ್ವೇರ್ 1999ರ ಜುಲೈನಲ್ಲಿ ಷೇರುಪೇಟೆಗೆ ಪದಾರ್ಪಣೆ ಮಾಡಿದಾಗ 29.35 ರೂ ಷೇರುಬೆಲೆ ಹೊಂದಿತ್ತು. 2014ರವರೆಗೂ ಇದರ ಮೌಲ್ಯ ಹೆಚ್ಚೂಕಡಿಮೆ ಅಷ್ಟೇ ಇತ್ತು. 2014ರ ಬಳಿಕ ಸೊನಾಟ ಸಾಫ್ಟ್ವೇರ್ನ ಷೇರುಬೆಲೆ ಬಹಳ ವೇಗದಲ್ಲಿ ಬೆಳೆದಿದೆ. ಅದರಲ್ಲೂ 2020ರ ಏಪ್ರಿಲ್ ನಂತರ ಇದರ ಬೆಲೆ ರಾಕೆಟ್ನಂತೆ ಮಿಂಚಿನಂತೆ ಮೇಲೇರಿದೆ.
ಟೆಕ್ನಾಲಜಿ ವಲಯಕ್ಕೆ ಸಾಫ್ಟ್ವೇರ್ ಪರಿಹಾರ ಸೇವೆ ಒದಗಿಸುವ ಸೊನಾಟ ಸಾಫ್ಟ್ವೇರ್ ಸಂಸ್ಥೆ ಬೆಂಗಳೂರು ಮೂಲದ್ದು. ಇದರ ಒಟ್ಟು ಷೇರುಸಂಪತ್ತು 14,500 ಕೋಟಿ ರೂನಷ್ಟಿದೆ. ಈ ಷೇರುಸಂಪತ್ತಿನಲ್ಲಿ ಮಾಲೀಕರು ಮತ್ತು ಪ್ರೊಮೋಟರ್ಸ್ ಪಾಲು ಶೇ. 26.37ರಷ್ಟಿದೆ. ಉಳಿದದ್ದು ಸಾರ್ವಜನಿಕ ಷೇರುದಾರರಿಗೆ ಸೇರಿದ್ದು. ಸಾರ್ವಜನಿಕ ಹೂಡಿಕೆಗಳಲ್ಲಿ ರೀಟೇಲ್ ಹೂಡಿಕೆದಾರರ ಪ್ರಮಾಣ ಶೇ. 22.63ರಷ್ಟಿದೆ. ಮ್ಯೂಚುವಲ್ ಫಂಡ್ ಮತ್ತು ವಿದೇಶೀ ಹೂಡಿಕೆದಾರರು ತಲಾ ಶೇ 13ರಷ್ಟು ಷೇರುಪಾಲು ಹೊಂದಿದ್ದಾರೆ.