ಕರೋನಾ ವೈರಸ್ ವಿರುದ್ದದ ಹೋರಾಟಕ್ಕೆ ಹೊಸ ಶಕ್ತಿ ತುಂಬಲಿದೆ ಹ್ಯುಂಡೈ
ಕರೋನಾ ವೈರಸ್ ಮಹಾಮಾರಿಯು ಇಡೀ ಜಗತ್ತಿನಾದ್ಯಂತ ಆವರಿಸಿಕೊಂಡಿದ್ದು, ಭಾರತದಲ್ಲೂ ಈಗಾಗಲೇ 920 ಜನರಲ್ಲಿ ಸೋಂಕು ಪತ್ತೆಯಾಗಿರುವುದಲ್ಲದೆ 20 ಜನರ ಜೀವ ಪಡೆದಿದೆ. ಹೀಗಾಗಿ ವೈರಸ್ ಹರಡುವಿಕೆಯನ್ನು ಪರಿಣಾಮಕಾರಿಯಾಗಿ ತಗ್ಗಿಸಲು ಹಲವಾರು ಕಠಿಣ ಕ್ರಮಗಳನ್ನು ಕೈಗೊಂಡಿದ್ದು, ಕಾರ್ಪೋರೆಟ್ ಕಂಪನಿಗಳು ಸಹ ವೈರಸ್ ವಿರುದ್ದದ ಹೋರಾಟಕ್ಕೆ ಸಹಾಯ ಹಸ್ತ ಚಾಚಿವೆ.
ಕರೋನಾ ವೈರಸ್ ಅಟ್ಟಹಾಸ ಹೆಚ್ಚಾಗುತ್ತಿದ್ದಂತೆ ಇಡೀ ದೇಶವನ್ನೇ ಲಾಕ್ ಡೌನ್ ಮಾಡಲಾಗಿದ್ದು, ಬಹುತೇಕ ವಾಣಿಜ್ಯ ಚಟುವಟಿಕೆಗಳನ್ನು ಸ್ಥಗಿತಗೊಂಡಿವೆ. ಈ ಹಿನ್ನಲೆಯಲ್ಲಿ ಆರ್ಥಿಕ ಪರಿಸ್ಥಿತಿ ಶೋಚನೀಯ ಸ್ಥಿತಿ ತಲುಪಿದ್ದು, ಕರೋನಾ ವಿರುದ್ಧ ಹೋರಾಟಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದೇಣಿಗೆ ಸಂಗ್ರಹ ಅಭಿಯಾನವನ್ನು ಕೈಗೊಂಡಿವೆ. ದೇಣಿಗೆ ಸಂಗ್ರಹ ಅಭಿಯಾನಕ್ಕೆ ಈಗಾಗಲೇ ಭಾರೀ ಪ್ರಮಾಣದ ನೆರವು ಹರಿದು ಬಂದಿದ್ದು, ಉದ್ಯಮಿಗಳು, ಚಿತ್ರ ನಟರು, ಸರ್ಕಾರಿ ಅಧಿಕಾರಿಗಳು ಮತ್ತು ಜನಸಾಮಾನ್ಯರು ಸಹ ತಮ್ಮ ಕೈಲಾದಷ್ಟು ದೇಣಿಗೆ ನೀಡಿ ಕರೋನಾ ವಿರುದ್ಧ ಸರ್ಕಾರದ ಹೋರಾಟಕ್ಕೆ ಶಕ್ತಿ ತುಂಬುತ್ತಿದ್ದಾರೆ.
ಅದರಲ್ಲೂ ಆಟೋ ಉತ್ಪಾದನಾ ಕಂಪನಿಗಳು ಕರೋನಾ ವಿರುದ್ದ ಹೋರಾಟಕ್ಕಾಗಿ ಸಂಕಷ್ಟದ ಸಮಯದಲ್ಲೂ ಸರ್ಕಾರದ ಜೊತೆ ನಿಂತಿರುವುದಲ್ಲದೆ ವೈದ್ಯಕೀಯ ಉಪಕರಣಗಳ ತಯಾರಿಕೆಯ ಜೊತೆಗೆ ಧನಸಹಾಯವನ್ನು ಕೂಡಾ ಮಾಡುತ್ತಿವೆ.
ಅಡ್ವಾನ್ಸ್ ಟೆಸ್ಟಿಂಗ್ ಕಿಟ್‌ಗಳಲ್ಲಿ ವೈರಸ್ ಹೊಂದಿರುವ ವ್ಯಕ್ತಿಯನ್ನು ಪ್ರಾಥಮಿಕ ಹಂತದಲ್ಲೇ ಪತ್ತೆಹಚ್ಚಬಹುದಾಗಿದ್ದು, ಅಗತ್ಯವಿರುವ ರಾಜ್ಯ ಸರ್ಕಾರಗಳಿಗೆ ಶೀಘ್ರದಲ್ಲೇ 25 ಸಾವಿರ ಟೆಸ್ಟಿಂಗ್ ಕಿಟ್‌ಗಳನ್ನು ನೀಡಲಿದೆ. ದಕ್ಷಿಣ ಕೋರಿಯಾ ಸರ್ಕಾರಕ್ಕೂ ಸುಮಾರು 1 ಲಕ್ಷ ಟೆಸ್ಟಿಂಗ್ ಕಿಟ್‌ಗಳನ್ನು ನೀಡಿರುವ ಹ್ಯುಂಡೈ ಕಂಪನಿಯು ಅಲ್ಲಿಂದಲೇ ಭಾರತಕ್ಕೂ 25 ಸಾವಿರ ಯುನಿಟ್ ವಿತರಣೆ ಮಾಡಲಿದ್ದು, ಕೋರಿಯಾ ಮತ್ತು ಭಾರತದಲ್ಲಿ ಮಾತ್ರವಲ್ಲದೆ ಕಾರು ಮಾರಾಟ ವ್ಯಾಪ್ತಿಯನ್ನು ಹೊಂದಿರುವ 193 ರಾಷ್ಟ್ರಗಳಿಗೂ ಇಂತಿಷ್ಟು ಟೆಸ್ಟಿಂಗ್ ಕಿಟ್‌ಗಳನ್ನು ಉಚಿತವಾಗಿ ನೀಡುತ್ತಿದೆ.
ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ನೀತಿಯಡಿ ವಾಣಿಜ್ಯ ಚಟುವಟಿಕೆಯೊಂದಿಗೆ ಸಾಮಾಜಿಕ ಜವಾಬ್ದಾರಿ ಕೂಡಾ ಪ್ರಮುಖವಾಗಿದೆ ಎಂದು ಸ್ಪಷ್ಟಪಡಿಸಿರುವ ಹ್ಯುಂಡೈ ಸಂಸ್ಥೆಯು ಸಂಕಷ್ಟದಲ್ಲಿದ್ದಾಗ ಸರ್ಕಾರದ ಜೊತೆಯಿರುವುದು ನಮ್ಮ ಕರ್ತವ್ಯ ಎಂದು ತನ್ನ ಪ್ರಕಟನೆಯನ್ನು ಹೊರಡಿಸಿದೆ.
ಇನ್ನು ದೇಶದ ಪ್ರಮುಖ ಆಟೋ ಉತ್ಪಾದನಾ ಕಂಪನಿಗಳಲ್ಲಿ ಒಂದಾಗಿರುವ ಬಜಾಜ್ ಗ್ರೂಪ್ ಕೂಡಾ ಕೋರನಾ ವೈರಸ್ ವಿರುದ್ಧ ಹೋರಾಟಕ್ಕೆ ಭಾರೀ ಪ್ರಮಾಣ ದೇಣಿಗೆ ನೀಡಿದ್ದು, ರೂ. 100 ಕೋಟಿ ಮೌಲ್ಯದ ವೈದ್ಯಕೀಯ ಉಪಕರಣಗಳನ್ನು ಒದಗಿಸುವುದಾಗಿ ಘೋಷಣೆ ಮಾಡಿದೆ.