ಕರೋನಾ ವೈರಸ್ ವಿರುದ್ದದ ಹೋರಾಟಕ್ಕಾಗಿ ರೂ.100 ಕೋಟಿ ದೇಣಿಗೆ ನೀಡಿದ ಹೀರೋ ಗ್ರೂಪ್ಸ್
ಕರೋನಾ ವೈರಸ್ ಅಟ್ಟಹಾಸ ಹೆಚ್ಚಾಗುತ್ತಿದ್ದಂತೆ ಇಡೀ ದೇಶವನ್ನೇ ಲಾಕ್ ಡೌನ್ ಮಾಡಲಾಗಿದ್ದು, ಬಹುತೇಕ ವಾಣಿಜ್ಯ ಚಟುವಟಿಕೆಗಳನ್ನು ಸ್ಥಗಿತಗೊಂಡಿವೆ. ಈ ಹಿನ್ನಲೆಯಲ್ಲಿ ಆರ್ಥಿಕ ಪರಿಸ್ಥಿತಿ ಶೋಚನೀಯ ಸ್ಥಿತಿಯತ್ತ ತಲುಪಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ದೇಣಿಗೆ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ದೇಣಿಗೆ ಸಂಗ್ರಹ ಅಭಿಯಾನಕ್ಕೆ ಈಗಾಗಲೇ ಭಾರೀ ಪ್ರಮಾಣದ ನೆರವು ಹರಿದು ಬಂದಿದ್ದು, ಉದ್ಯಮಿಗಳು, ಚಿತ್ರ ನಟರು, ಸರ್ಕಾರಿ ಅಧಿಕಾರಿಗಳು ಮತ್ತು ಜನಸಾಮಾನ್ಯರು ಸಹ ತಮ್ಮ ಕೈಲಾದಷ್ಟು ದೇಣಿಗೆ ನೀಡಿ ಕರೋನಾ ವಿರುದ್ಧ ಸರ್ಕಾರದ ಹೋರಾಟಕ್ಕೆ ಶಕ್ತಿ ತುಂಬಿದ್ದಾರೆ. ಅದರಲ್ಲೂ ಆಟೋ ಉತ್ಪಾದನಾ ಕಂಪನಿಗಳು ಕರೋನಾ ವಿರುದ್ದ ಹೋರಾಟಕ್ಕಾಗಿ ಸಂಕಷ್ಟದ ಸಮಯದಲ್ಲೂ ಸರ್ಕಾರದ ಜೊತೆ ನಿಂತಿರುವುದಲ್ಲದೆ ವೈದ್ಯಕೀಯ ಉಪಕರಣಗಳ ತಯಾರಿಕೆಗೆ ಮುಂದಾಗಿವೆ.
ದೇಶದ ಪ್ರಮುಖ ಆಟೋ ಉತ್ಪಾದನಾ ಕಂಪನಿಗಳಲ್ಲಿ ಒಂದಾಗಿರುವ ಹೀರೋ ಸಮೂಹ ಸಂಸ್ಥೆಗಳು ಕೂಡಾ ಒಟ್ಟು ರೂ. 100 ಕೋಟಿ ದೇಣಿಗೆ ಘೋಷಣೆ ಮಾಡಿದ್ದು, ಹಣಕಾಸು ಸಹಾಯದೊಂದಿಗೆ ವೈದ್ಯಕೀಯ ಉಪಕರಣಗಳನ್ನು ಸಹ ನೀಡುವುದಾಗಿ ಘೋಷಣೆ ಮಾಡಿದೆ.
ಕರೋನಾ ವಿರುದ್ಧ ಹೋರಾಟಕ್ಕೆ ಸದ್ಯ ಹಣಕಾಸಿನ ಸಹಾಯದೊಂದಿಗೆ ತುರ್ತು ವೈದ್ಯಕೀಯ ಉಪಕರಣಗಳ ಅವಶ್ಯಕತೆಯಿದ್ದು, ವೆಂಟಿಲೆಟರ್ ಮತ್ತು ಮಾಸ್ಕ್ ಉತ್ಪಾದನೆಗೆ ಪ್ರಮುಖ ಆಟೋ ಕಂಪನಿಗಳು ಒಪ್ಪಿಗೆ ಸೂಚಿಸಿವೆ.
ಇನ್ನು ದೇಶದ ಪ್ರಮುಖ ಆಟೋ ಉತ್ಪಾದನಾ ಕಂಪನಿಗಳಲ್ಲಿ ಒಂದಾಗಿರುವ ಬಜಾಜ್ ಗ್ರೂಪ್ ಕಂಪನಿಯು ಸಹ ರೂ. 100 ಕೋಟಿ ದೇಣಿಗೆ ಘೋಷಣೆ ಮಾಡಿದ್ದು, ಹಣಕಾಸಿನ ಸಹಾಯ ಬದಲು ವೈದ್ಯಕೀಯ ಉಪಕರಣಗಳನ್ನು ನೀಡುವುದಾಗಿ ಘೋಷಣೆ ಮಾಡಿದೆ. ಸುಮಾರು 200ಕ್ಕೂ ಹೆಚ್ಚು ಎನ್‌ಜಿಓ ಸಂಸ್ಥೆಗಳ ಮೂಲಕ ಆರೋಗ್ಯ ಕೇಂದ್ರಗಳಿಗೆ ಅಗತ್ಯವಿರುವ ಟೆಸ್ಟಿಂಗ್ ಕಿಟ್, ವೆಂಟಿಲೆಟರ್ ಮತ್ತು ಐಸಿಯು ಯುನಿಟ್‌ಗೆ ಅಗತ್ಯವಿರುವ ಸೌಲಭ್ಯಗಳನ್ನು ನೀಡುವುದಾಗಿ ಘೋಷಣೆ ಮಾಡಿದ್ದು, ಆರೋಗ್ಯ ಇಲಾಖೆಯ ಬೇಡಿಕೆಗಳನ್ನು ಪೂರೈಸಲು ಸಿದ್ದವಾಗಿದೆ.
ಇದರ ಜೊತೆಗೆ ಗ್ರಾಮೀಣ ಭಾಗದಲ್ಲಿನ ಆರೋಗ್ಯ ಸೌಕರ್ಯ ಮತ್ತು ಮೂಲಭೂತ ಸೌಕರ್ಯಗಳ ನಿರ್ಮಾಣಕ್ಕಾಗಿ ವಿಶೇಷ ಆದ್ಯತೆ ನೀಡುವುದಾಗಿ ಹೇಳಿಕೊಂಡಿರುವ ಬಜಾಜ್ ಕಂಪನಿಯು ಪರಿಸರ ಮತ್ತು ಆರೋಗ್ಯ ಕಾಳಜಿಗೆ ವಿಶೇಷ ಆಸಕ್ತಿ ವಹಿಸಿದ್ದು, ಶೀಘ್ರದಲ್ಲೇ ವೈದ್ಯಕೀಯ ಉಪಕರಣಗಳನ್ನು ಸರಬರಾಜು ಮಾಡುವುದಾಗಿ ಘೋಷಣೆ ಮಾಡಿದೆ. ಬಜಾಜ್ ಮಾತ್ರವಲ್ಲದೇ ಪ್ರಮುಖ ಆಟೋ ಕಂಪನಿಗಳು ವಿವಿಧ ಮಾದರಿಯ ನೆರವು ಘೋಷಣೆ ಮಾಡಿವೆ.