ವಾಷಿಂಗ್ಟನ್, ಜೂನ್ 6: ಶ್ವೇತ ವರ್ಣೀಯ ಪೊಲೀಸ್ ಅಧಿಕಾರಿ ಡೆರೆಕ್ ಚೌವಿನ್ ಕಾಲಡಿಗೆ ಸಿಲುಕಿ ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ನರಳಿ ನರಳಿ ಪ್ರಾಣ ಬಿಟ್ಟಿದ್ದರು. ‘ವೈಟ್’ ಪೊಲೀಸ್ ಡೆರೆಕ್ ಚೌವಿನ್ ಅಮಾನವೀಯ ವರ್ತನೆಯಿಂದಾಗಿ ‘ಬ್ಲಾಕ್’ ಮ್ಯಾನ್ ಜಾರ್ಜ್ ಫ್ಲಾಯ್ಡ್ ಪ್ರಾಣ ಕಳೆದುಕೊಂಡರು.
ಈ ಘೋರ ಕೃತ್ಯವನ್ನು ಖಂಡಿಸಿ, ಅಮೇರಿಕಾದಾದ್ಯಂತ ಪ್ರತಿಭಟನೆ ನಡೆಯುತ್ತಲೇ ಇದೆ. ಹೀಗಿರುವಾಗಲೇ, ”ಜಾರ್ಜ್ ಫ್ಲಾಯ್ಡ್ ಪಾಲಿಗಿದು ಶ್ರೇಷ್ಠ ದಿನ” ಎಂದಿದ್ದಾರೆ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್.
ಜಾರ್ಜ್ ಫ್ಲಾಯ್ಡ್ ಸಾವಿಗೆ ನ್ಯಾಯ ದೊರಕಿಸಿ ಕೊಡಲು ಡೊನಾಲ್ಡ್ ಟ್ರಂಪ್ ಆಡಳಿತ ವಿಫಲವಾಗಿದೆ. ಜಾರ್ಜ್ ಫ್ಲಾಯ್ಡ್ ಹತ್ಯೆಗೆ ರಾಜಕೀಯ ಲೇಪ ನೀಡುತ್ತಿರುವ ಡೊನಾಲ್ಡ್ ಟ್ರಂಪ್ ವಿರುದ್ಧ ಜನ ಕಿಡಿಕಾರಿದ್ದಾರೆ.
ಅಮೇರಿಕಾದಲ್ಲಿ ತಲೆದೊರಿರುವ ನಿರುದ್ಯೋಗ ಸಮಸ್ಯೆ ಬಗ್ಗೆ ತುಟಿಕ್ ಪಿಟಿಕ್ ಎನ್ನದ ಡೊನಾಲ್ಡ್ ಟ್ರಂಪ್, ”ಜನಾಂಗ, ಬಣ್ಣ, ಲಿಂಗ, ಧರ್ಮವನ್ನು ಲೆಕ್ಕಸದೆ ಪ್ರತಿ ಕ್ಷೇತ್ರದಲ್ಲೂ ಸಮಾನತೆ ಇರಬೇಕು. ಜಾರ್ಜ್ ಫ್ಲಾಯ್ಡ್ ನಿಂದ ಒಳ್ಳೆಯದ್ದೇ ಆಗಿದೆ. ಸಮಾನತೆಯ ದೃಷ್ಟಿಯಿಂದ ಜಾರ್ಜ್ ಫ್ಲಾಯ್ಡ್ ಪಾಲಿಗಿದು ಶ್ರೇಷ್ಠ ದಿನ” ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಆದ್ರೆ, ಸಮಾನತೆ ಬಗ್ಗೆ ಬಾಯಲ್ಲಿ ಮಾತನಾಡುವ ಡೊನಾಲ್ಡ್ ಟ್ರಂಪ್, ಜಾರ್ಜ್ ಫ್ಲಾಯ್ಡ್ ಹತ್ಯೆಗೆ ನ್ಯಾಯ ದೊರಕಿಸಿಕೊಡುವಲ್ಲಿ ವಿಫಲರಾಗಿದ್ದಾರೆ ಎಂದು ಹಲವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.