ಅಮೆರಿಕಾದ 50 ಬಿಲಿಯನ್ ಡಾಲರ್ ಮೊತ್ತದ ಸರಕಿನ ಮೇಲೆ ಹೆಚ್ಚುವರಿ ಸುಂಕ ವಿಧಿಸಿದ ಚೀನಾ
ಬೀಜಿಂಗ್: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಚೀನಾದ ಸರಕಿನ ಮೇಲೆ ಶೇ.25 ರಷ್ಟು ತೆರಿಗೆ ಹೆಚ್ಚಿಸಿದ ನಂತರ ಚೀನಾ ಕೂಡಾ ಅಮೆರಿಕಾದ 50 ಬಿಲಿಯನ್ ಡಾಲರ್ ಮೊತ್ತದ ವಸ್ತುಗಳ ಮೇಲೆ ಹೆಚ್ಚುವರಿ ಸುಂಕ ವಿಧಿಸಿದ್ದು, ವಿಶ್ವದ ಎರಡು ಬಲಿಷ್ಠ ಆರ್ಥಿಕ ಶಕ್ತಿಗಳ ನಡುವೆ ವ್ಯಾಪಾರದ ಯುದ್ದ ಆರಂಭವಾಗಿದೆ.
ಚೀನಾ ಬೌದ್ದಿಕ ಆಸ್ತಿ ಕಳ್ಳತನ ಮಾಡುತ್ತಿದ್ದು, ಅಸಮರ್ಪಕ ವ್ಯಾಪಾರ ಪದ್ದತಿಯನ್ನು ಅನುಸರಿಸುತ್ತಿದೆ ಎಂದು ನಿನ್ನೆ ಆರೋಪಿಸಿದ ಟ್ರಂಪ್, ಚೀನಾದ ವಸ್ತುಗಳ ಮೇಲೆ ಶೇ. 25 ರಷ್ಟು ಸುಂಕವನ್ನು ಹೆಚ್ಚಿಸಿದ್ದರು. ಇದರಿಂದಾಗಿ ಚೀನಾ ಕೂಡಾ ಈಗ ಅಮೆರಿಕಾದ ಸುಮಾರು 50 ಬಿಲಿಯನ್ ಡಾಲರ್ ಮೊತ್ತದ 659 ವಸ್ತುಗಳ ಮೇಲೆ ಹೆಚ್ಚುವರಿ ಸುಂಕ ವಿಧಿಸಿದೆ ಎಂದು ಕ್ಸಿನುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಅಮೆರಿಕಾ ವಸ್ತುಗಳ ಮೇಲೆ ವಿಧಿಸಲಾಗಿರುವ ಹೆಚ್ಚುವರಿ ಸುಂಕದ ಪಟ್ಟಿಯಲ್ಲಿರುವ ವಸ್ತುಗಳನ್ನು ಚೀನಾ ಬಿಡುಗಡೆ ಮಾಡಿದೆ. ಜುಲೈ 6, 2018ರಿಂದ ಜಾರಿಗೆ ಬರುವಂತೆ ಕೃಷಿ ಉತ್ಪನ್ನ, ವಾಹನಗಳು, ಸಾಗರೋತ್ಪನ್ನ ವಸ್ತುಗಳು ಸೇರಿದಂತೆ 34 ಬಿಲಿಯನ್ ಡಾಲರ್ ಮೊತ್ತದ 545 ವಸ್ತುಗಳ ಹೆಚ್ಚುವರಿ ಸುಂಕ ವಿಧಿಸಿರುವುದಾಗಿ ಚೀನಾ ಕಸ್ಟಮ್ಸ್ ಸುಂಕ ಆಯೋಗ ತಿಳಿಸಿದೆ.
ರಾಸಾಯನಿಕ ಉತ್ಪನ್ನಗಳು, ವೈದ್ಯಕೀಯ ಉಪಕರಣ, ಇಂಧನ ಉಪಕರಣ ಮತ್ತಿತರ ಉಳಿದಿರುವ 114 ಸರಕುಗಳ ಮೇಲಿನ ಹೆಚ್ಚುವರಿ ಸುಂಕ ವಿಧಿಸುವ ದಿನಾಂಕವನ್ನು ನಂತರ ಪ್ರಕಟಿಸಲಾಗುವುದು ಎಂದು ಆಯೋಗ ಹೇಳಿದೆ.
ಜುಲೈ 6 ರಿಂದ ಸುಮಾರು 34 ಬಿಲಿಯನ್ ಡಾಲರ್ ಮೊತ್ತದ ಚೀನಾದ ಉತ್ಪನ್ನಗಳ ಮೇಲೆ ಅಮೆರಿಕಾ ಹೆಚ್ಚುವರಿ ಸುಂಕ ವಿಧಿಸುವ ಸಾಧ್ಯತೆ ಇದೆ. ಈ ಮಧ್ಯೆ 16 ಬಿಲಿಯನ್ ಮೊತ್ತದ ಚೈನಾ ಉತ್ಪನ್ನಗಳ ಬಗ್ಗೆ ತೆರಿಗೆ ವಿಧಿಸುವ ಸಂಬಂಧ ಸಾರ್ವಜನಿಕರಿಂದ ಪ್ರತಿಕ್ರಿಯೆ ಕೇಳಲಾಗುತ್ತಿದೆ.
ಉಭಯ ದೇಶಗಳ ನಡುವೆ ವ್ಯಾಪಾರ ಸಂಬಂಧ ಮಾತುಕತೆ ಮುರಿದು ಬಿದ್ದ ನಂತರ ಮೇ ತಿಂಗಳ ಮಧ್ಯಭಾಗದಿಂದ ಅಸಮಾಧಾನ ಹೊಗೆಯಾಡುತ್ತಿದೆ.
ಚೀನಾದ ವಸ್ತುಗಳ ಮೇಲೆ ಸುಂಕವನ್ನು ವಿಧಿಸುವ ಟ್ರಂಪ್ ನಿರ್ಧಾರವು ಕೆನಡಾ, ಮೆಕ್ಸಿಕೋ ಮತ್ತು ಯುರೋಪಿಯನ್ ಒಕ್ಕೂಟದ ರಾಷ್ಟ್ರೀಯ ಭದ್ರತಾ ಆಧಾರದ ಮೇಲೆ ಉಕ್ಕಿನ ಮತ್ತು ಅಲ್ಯೂಮಿನಿಯಂ ಆಮದುಗಳ ಮೇಲಿನ ಸುಂಕ ಕಡಿತವನ್ನು ವಿಧಿಯನ್ನು ಅನುಸರಿಸುತ್ತಿದೆ.