ಕುತ್ತಿಗೆ ನೋವಿನಿಂದ ಬಳಲುತ್ತಿರುವ ವಿರಾಟ್ ಕೊಹ್ಲಿಗೆ ಯೋಯೋ ಟೆಸ್ಟ್!
ಜೂನ್ 27ರಂದು ಟೀಂ ಇಂಡಿಯಾ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದ್ದು ಈ ಸಂಬಂಧ ಕುತ್ತಿಗೆ ನೋವಿನಿಂದ ಬಳಲುತ್ತಿರುವ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ, ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಯೋಯೋ ಪರೀಕ್ಷೆಗೆ ಮುಂದಾಗಿದ್ದಾರೆ.
ಕಳೆದ ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್)ನಲ್ಲಿ ವಿರಾಟ್ ಕೊಹ್ಲಿ ಕುತ್ತಿಗೆ ಗಾಯದ ಸಮಸ್ಯೆಗೆ ಗುರಿಯಾಗಿದ್ದರು. ಇದರಿಂದಾಗಿ ಇಂಗ್ಲೆಂಡ್ ಕೌಂಟಿಯಲ್ಲಿ ಆಡಬೇಕಿದ್ದ ಕೊಹ್ಲಿ ಕೌಂಟಿಯಿಂದ ದೂರ ಉಳಿದಿದ್ದರು. ಇದೀಗ ಟೀಂ ಇಂಡಿಯಾದ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದ್ದು ಈ ಹಿನ್ನೆಲೆಯಲ್ಲಿ ಟೀಂ ಇಂಡಿಯಾದ ಟ್ರೈನರ್ ಶಂಕರ್ ಬಸು ಮತ್ತು ಇತರ ಸಿಬ್ಬಂದಿಯಿಂದ ವಿರಾಟ್ ಕೊಹ್ಲಿ, ಎಂಎಸ್ ಧೋನಿ, ಸುರೇಶ್ ರೈನಾ, ಭುವನೇಶ್ವರ್ ಕುಮಾರ್ ಮತ್ತು ಕೇದಾರ್ ಜಾದವ್ ಯೋಯೋ ಟೆಸ್ಟ್ ತೆಗೆದುಕೊಳ್ಳಲಿದ್ದಾರೆ.
ಟೀಂ ಇಂಡಿಯಾದ ಯಾವುದೇ ಪ್ರವಾಸ ಕೈಗೊಳ್ಳುವ ಮುನ್ನ ತಂಡದ ಆಟಗಾರರ ಆರಂಭಿಕ ಫಿಟ್ನೆಸ್ ತಿಳಿದುಕೊಳ್ಳುವ ಸಲುವಾಗಿ ಯೋಯೋ ಪರೀಕ್ಷೆಯನ್ನು ನಡೆಸಲಾಗುತ್ತದೆ. ಇದರಲ್ಲಿ ಆಟಗಾರರ ಫಿಟ್ನೆಸ್ ಕುರಿತಂತೆ ಸಂಪೂರ್ಣ ವಿವರ ಸಿಗುತ್ತದೆ.
ವಿರಾಟ್ ಕೊಹ್ಲಿ ಕುತ್ತಿಗೆ ನೋವಿನಿಂದ ಬಳಲುತ್ತಿರುವುದರಿಂದ ಅವರು ಐರ್ಲೆಂಡ್ ಟಿ20 ಪಂದ್ಯಕ್ಕೆ ಲಭ್ಯರಿದ್ದಾರಾ ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ಒಮ್ಮೆ ಯೋಯೋ ಟೆಸ್ಟ್ ಪಾಸು ಮಾಡಿದರೇ ಇಂಗ್ಲೆಂಡ್ ವಿರುದ್ಧದ ಟಿ20, ಏಕದಿನ ಮತ್ತು ಟೆಸ್ಟ್ ಸರಣಿಗೆ ಲಭ್ಯರಿರಲಿದ್ದಾರೆ.