ನ್ಯೂಯಾರ್ಕ್: ನ್ಯೂಯಾರ್ಕ್ ನಗರದ ಕ್ವೀನ್ಸ್ ಜಿಲ್ಲೆಯ ನೆರೆಯಲ್ಲಿರುವ ಜಮೈಕಾದ ತನ್ನ ಮಾಜಿ ಪ್ರಿಯಕರನ ನಿವಾಸಕ್ಕೆ ಬೆಂಕಿ ಹಚ್ಚಿ, ಇಬ್ಬರ ಸಾವಿಗೆ ಕಾರಣವಾದ ಆರೋಪದ ಮೇಲೆ ಬಾಲಿವುಡ್ ನಟಿ ನರ್ಗೀಸ್ ಫಖ್ರಿಯ ಸಹೋದರಿ ಆಲಿಯಾ ಫಕ್ರಿಯನ್ನು ಪೊಲೀಸರು ಬಂಧಿಸಿದ್ದಾರೆ. ಆಲಿಯಾ ಫಖ್ರಿ ವಿರುದ್ಧ ಹತ್ಯೆ ಹಾಗೂ ಇನ್ನಿತರ ಸಂಬಂಧಿತ ದೋಷಾರೋಪಗಳನ್ನು ಹೊರಿಸಲಾಗಿದೆ ಎಂದು ಕ್ವೀನ್ಸ್ ಜಿಲ್ಲೆಯ ಅಟಾರ್ನಿ ಮೆಲಿಂದಾ ಕಟ್ಝ್ ಹೇಳಿದ್ದಾರೆ.
ಮೃತ ವ್ಯಕ್ತಿಗಳನ್ನು ಆಲಿಯಾ ಫಖ್ರಿಯ ಮಾಜಿ ಪ್ರಿಯಕರ ಎಡ್ವರ್ಡ್ ಜಾಕೋಬ್ಸ್ (35) ಹಾಗೂ ಅನಾಸ್ಟಾಸಿಯ ಎಟ್ಟಿನ್ನೆ (33) ಎಂದು ಗುರುತಿಸಲಾಗಿದೆ.
ಜಾಕೋಬ್ ನಿವಾಸದ ಪ್ರವೇಶ ದ್ವಾರದ ಬಳಿಯಿದ್ದ ಪ್ರತ್ಯೇಕ ಗ್ಯಾರೇಜ್ ಗೆ ಆಲಿಯಾ ಬೆಂಕಿ ಹಚ್ಚಿದ್ದು, ತಪ್ಪಿಸಿಕೊಳ್ಳಲು ಯಾವುದೇ ಅವಕಾಶವಿರದಿದ್ದುದರಿಂದ, ಬೆಂಕಿಯ ಜ್ವಾಲೆಯಲ್ಲಿ ಸಿಲುಕಿ ಹೊಗೆ ಮತ್ತು ಸುಟ್ಟು ಗಾಯಗಳಿಂದ ಜಾಕೋಬ್ಸ್ ಮತ್ತು ಎಟ್ಟಿನ್ನೆ ಮೃತಪಟ್ಟಿದ್ದಾರೆ ಎಂದು ಕಟ್ಝ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಕ್ವೀನ್ಸ್ ನ ಪಾರ್ಸನ್ಸ್ ಬೌಲೆವರ್ಡ್ ನಿವಾಸಿಯಾದ 43 ವರ್ಷದ ಆಲಿಯಾ ಫಖ್ರಿ ವಿರುದ್ಧದ ದೋಷಾರೋಪವನ್ನು ನ್ಯಾಯಾಧೀಶರು ನಿಗದಿಪಡಿಸಿದ ನಂತರ, ನವೆಂಬರ್ 27ರಂದು ಅವರನ್ನು ಪೊಲೀಸರ ವಶಕ್ಕೆ ಒಪ್ಪಿಸಲಾಯಿತು. ಆಲಿಯಾ ವಿರುದ್ಧ ಹತ್ಯೆಗೆ ಸಂಬಂಧಿಸಿದ ವಿವಿಧ ಆರೋಪಗಳನ್ನು ಹೊರಿಸಲಾಗಿದ್ದು, ಒಂದು ವೇಳೆ ಈ ಆರೋಪಗಳು ಸಾಬೀತಾದರೆ, ಅವರು ಜೀವಾವಧಿ ಶಿಕ್ಷೆಗೊಳಗಾಗುವ ಸಾಧ್ಯತೆ ಇದೆ.
ಮುಂದಿನ ವಿಚಾರಣೆಯನ್ನು ಡಿಸೆಂಬರ್ 9ಕ್ಕೆ ನಿಗದಿಗೊಳಿಸಲಾಗಿದೆ.