ನವದೆಹಲಿ, ಫೆಬ್ರವರಿ.19: ಕೊರೊನಾವೈರಸ್ ಲಸಿಕೆ ವಿತರಣೆಯಲ್ಲಿ ಭಾರತ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಕೇವಲ 34 ದಿನಗಳಲ್ಲೇ 1 ಕೋಟಿಗೂ ಅಧಿಕ ಮಂದಿಗೆ ಕೊವಿಡ್-19 ಲಸಿಕೆ ವಿತರಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ತಿಳಿಸಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕಳೆದ ಜನವರಿ.16ರಂದು ಮೊದಲ ಬಾರಿಗೆ ಕೊರೊನಾವೈರಸ್ ಲಸಿಕೆ ವಿತರಣೆ ಅಭಿಯಾನಕ್ಕೆ ಚಾಲನೆ ನೀಡಿದ್ದರು. ಅಂದಿನಿಂದ ಕಡಿಮೆ ದಿನಗಳಲ್ಲಿ ಅತಿಹೆಚ್ಚು ಜನರಿಗೆ ಲಸಿಕೆ ನೀಡಿದ ಜಗತ್ತಿನ 2ನೇ ರಾಷ್ಟ್ರ ಭಾರತವಾಗಿದೆ. ಅಮೆರಿಕಾ ಅಗ್ರಸ್ಥಾನದಲ್ಲಿದ್ದರೆ, ಇಂಗ್ಲೆಂಡ್ ಮೂರನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ.
ಭಾರತದಲ್ಲಿ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದಲ್ಲಿ ಸಂಶೋಧಿಸಿದ ಮತ್ತು ಪುಣೆಯ ಸೆರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ಉತ್ಪಾದಿಸಿದ ಕೊವಿಶೀಲ್ಡ್ ಮತ್ತು ಭಾರತ್ ಬಯೋಟೆಕ್ ಸಂಸ್ಥೆಯ ಕೊವ್ಯಾಕ್ಸಿನ್ ಲಸಿಕೆಯನ್ನು ವಿತರಿಸಲಾಗುತ್ತಿದೆ. ಮೊದಲ ಹಂತದ ಲಸಿಕೆ ನಂತರ ದೇಶದಲ್ಲಿ ಇದೀಗ ಎರಡನೇ ಹಂತದ ಲಸಿಕೆ ವಿತರಣೆ ಅಭಿಯಾನ ನಡೆಸಲಾಗುತ್ತಿದೆ.