ಹಾಸನದಲ್ಲಿ ಇಂದು ಮತ್ತೆ 4 ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆ; ನೆನ್ನೆ ಮುಂಬೈನಿಂದ ಬಂದಿದ್ದ ಒಂದೇ ಕುಟುಂಬದವರಲ್ಲಿ ಸೋಂಕು
ಹಾಸನ: ಹಸಿರು ವಲಯದಲ್ಲಿ ಇದ್ದ ಹಾಸನ ಜಿಲ್ಲೆಯಲ್ಲಿ ಇಂದು ಮತ್ತೆ ನಾಲ್ಕು ಕೊರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಜಿಲ್ಲೆಯಲ್ಲಿ ನೆನ್ನೆಯಿಂದ ಒಟ್ಟು ಒಂಭತ್ತು ಪ್ರಕರಣಗಳು ದಾಖಲಾಗಿವೆ.
ಈ ಸಂಬಂಧ ಮಾತನಾಡಿರುವ ಹಾಸನ ಜಿಲ್ಲಾಧಿಕಾರಿ ಅರ್.ಗಿರೀಶ್ ಅವರು, ಹಾಸನದಲ್ಲಿ ಮತ್ತೆ ನಾಲ್ಕು ಪಾಸಿಟಿವ್ ಪ್ರಕರಣ ವರದಿಯಾಗಿದೆ. ನಾಲ್ವರೂ ಒಂದೇ ಕುಟುಂಬದವರಾಗಿದ್ದು, ಗಂಡ, ಹೆಂಡತಿ ಇಬ್ಬರು ಮಕ್ಕಳಾಗಿದ್ದಾರೆ. ಗಂಡ ಮುಂಬೈನಲ್ಲಿ ಬ್ಯಾಂಕ್ ನಲ್ಲಿ ಪಿಗ್ಮಿ ಕಲೆಕ್ಟರ್ ಆಗಿದ್ದರು. ನಿನ್ನೆ ಮೇ 12 ರಂದು ಮುಂಬೈನಿಂದ ಹಾಸನಕ್ಕೆ ಸ್ವಂತ ಕಾರಿನಲ್ಲಿ ಬಂದಿದ್ದಾರೆ. ಬಂದವರು ಹೊರಗೆ ಎಲ್ಲೂ ಸುತ್ತಾಡಿಲ್ಲ. ನೇರವಾಗಿ ಜಿಲ್ಲಾಡಳಿತ ಮಾಡಿರುವ ಕ್ವಾರಂಟೈನ್ ಗೆ ಹೋಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಈಗ ಪಾಸಿಟಿವ್ ಬಂದಿರುವುದರಿಂದ ಇವರ ಜೊತೆಯಲ್ಲಿ ಮೊರಾರ್ಜಿ ಹಾಸ್ಟೆಲ್ನಲ್ಲಿ ಕ್ವಾರಂಟೈನ್ನಲ್ಲಿದ್ದ 57 ಮಂದಿಯನ್ನು ಹಾಸನದ ಹಿಮ್ಸ್ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.