ನವದೆಹಲಿ, ಮೇ 16: ”ಜಾಗತಿಕ ಮಹಾಮಾರಿ ಕೊರೊನಾ ವೈರಸ್ ಎಸೆದ ಸವಾಲನ್ನು ವರವಾಗಿ ಪರಿವರ್ತಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭಾರತ ಸರ್ಕಾರ ದೂರದೃಷ್ಟಿಯ ಯೋಜನೆಗಳೊಂದಿಗೆ ಹೆಜ್ಜೆಹಾಕುತ್ತಿದೆ. ಮೋದಿ ಘೋಷಿಸಿರುವ 20 ಲಕ್ಷ ಕೋಟಿ ರೂಪಾಯಿಯ ‘ಸ್ವಾವಲಂಬಿ ಭಾರತ’ ಯೋಜನೆ ಮುಂಬರುವ ದಿನಗಳಲ್ಲಿ ದೇಶವನ್ನು ಎಲ್ಲ ಕ್ಷೇತ್ರಗಳಲ್ಲಿಯೂ ಸಂಪೂರ್ಣ ಸ್ವಾವಲಂಬಿಯನ್ನಾಗಿಸಲಿದೆ. ಭಾರತವು ಅಭಿವೃದ್ಧಿ ಹೊಂದಿದ ದೇಶಗಳ ಸಾಲಿನಲ್ಲಿ ಸ್ಥಾನ ಪಡೆಯಲಿದೆ” ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಡಿ.ವಿ.ಸದಾನಂದ ಗೌಡ ಅಭಿಪ್ರಾಯ ಪಟ್ಟಿದ್ದಾರೆ.
”ಬಡವರು, ದಿನಗೂಲಿ ಕಾರ್ಮಿಕರು, ವಲಸಿಗರು, ನಿರ್ಗತಿಕರು, ರೈತರು, ಸ್ವಯಂ ಉದ್ಯೋಗಿಗಳು, ಬೀದಿಬದಿ ವ್ಯಾಪಾರಿಗಳು, ಸಣ್ಣ, ಅತಿಸಣ್ಣ ಉದ್ದಿಮೆದಾರರು, ಕೈಗಾರಿಕೋದ್ಯಮಿಗಳು, ಉತ್ಪಾದಕ ಹಾಗೂ ಸೇವಾ ವಲಯ – ಹೀಗೆ ಸಮಾಜದ ಪ್ರತಿಯೊಂದು ವರ್ಗವನ್ನೂ ಗಮನದಲ್ಲಿಟ್ಟುಕೊಂಡು ‘ಸ್ವಾವಲಂಬಿ ಭಾರತ’ ಯೋಜನೆಯನ್ನು ರೂಪಿಸಲಾಗಿದೆ”
”ಕೊರೊನಾ ಮಹಾಮಾರಿ ಸ್ವಾವಲಂಬನೆಯ ಮಹತ್ವವನ್ನು ತಿಳಿಸಿಕೊಟ್ಟಿದೆ. ಉದಾಹರಣೆಗೆ ಕೊರೊನಾ ಆರಂಭಕ್ಕೆ ಮುನ್ನ ಭಾರತವು ಸೋಂಕು ನಿರೋಧಕ ಪಿಪಿಇ ಕಿಟ್ಟುಗಳನ್ನು ತಯಾರಿಸುತ್ತಿರಲಿಲ್ಲ. ಆದರೆ ಈಗ ಸ್ವದೇಶಿ ಉದ್ಯಮಗಳು ಪ್ರತಿದಿನ 2 ಲಕ್ಷಕ್ಕೂ ಅಧಿಕ ಪಿಪಿಇ ಕಿಟ್ ಗಳನ್ನು ತಯಾರಿಸುತ್ತಿದ್ದಾರೆ. ಈ ಸಾಮರ್ಥ್ಯ ದಿನದಿಂದ ದಿನಕ್ಕೆ ವೃದ್ಧಿಸುತ್ತಿದೆ.”
‘ಔಷಧ ವಲಯದಲ್ಲಿ ಭಾರತವು ಜಗತ್ತಿನ ಬಹುತೇಕ ರಾಷ್ಟ್ರಗಳಿಗೆ ವಿವಿಧ ನಮೂನೆಯ ಔಷಧಗಳನ್ನು ರಫ್ತು ಮಾಡುತ್ತದೆ. ಆದರೆ ಔಷಧಗಳಿಗೆ ಬೇಕಾಗುವ ಎಪಿಐ ಮುಂತಾದ ಬಹಳಷ್ಟು ಮೂಲ ರಾಸಾಯನಿಕ ವಸ್ತುಗಳಿಗಾಗಿ ಚೀನಾ ಮತ್ತಿತರ ದೇಶಗಳ ಮೇಲೆ ಅವಲಂಬಿತವಾಗಿದೆ. ಹೀಗಾಗಿ ಮುಂಬರುವ ದಿನಗಳಲ್ಲಿ ಈ ವಸ್ತುಗಳ ಪರಾವಲಂಬನೆಯನ್ನು ಸಂಪೂರ್ಣ ಕಡಿಮೆ ಮಾಡಲು ಯೋಜನೆ ರೂಪಿಸಲಾಗುತ್ತಿದೆ” ಅಂತ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ.