ತಿರುವನಂತಪುರಂ, ಡಿ. 23: ಸಿಸ್ಟರ್ ಅಭಯಾ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ತಿರುವನಂತಪುರಂನ ಸಿಬಿಐ ವಿಶೇಷ ನ್ಯಾಯಾಲಯವು ಡಿಸೆಂಬರ್ 23ರಂದು ತಪ್ಪಿತಸ್ಥರಿಗೆ ಶಿಕ್ಷೆ ಪ್ರಮಾಣ ಪ್ರಕಟಿಸಿದೆ.
ಪ್ರಮುಖ ಆರೋಪಿಗಳಾದ ಫಾದರ್ ಥಾಮಸ್, ಸಿಸ್ಟರ್ ಸೆಫಿ ಇಬ್ಬರೂ ತಪ್ಪಿತಸ್ಥರು ಎಂದು ಮಂಗಳವಾರದಂದು ತೀರ್ಪು ನೀಡಿದ್ದ ನ್ಯಾಯಾಲಯವು ಇಂದು ಇಬ್ಬರಿಗೂ ಜೀವಾವಧಿ ಶಿಕ್ಷೆ ವಿಧಿಸಿದೆ.
ಫಾದರ್ ಥಾಮಸ್, ಸಿಸ್ಟರ್ ಸೆಫಿ ಇಬ್ಬರಿಗೂ ಐಪಿಸಿ ಸೆಕ್ಷನ್ 302 ಅಡಿಯಲ್ಲಿ 5 ಲಕ್ಷ ರು ವಿಧಿಸಲಾಗಿದೆ ಹಾಗೂ ಸೆಕ್ಷನ್ 449 ಐಪಿಸಿಯಡಿಯಲ್ಲಿ ಹೆಚ್ಚುವರಿ 1 ಲಕ್ಷ ರು ದಂಡ ಹಾಕಲಾಗಿದೆ.
ಐಪಿಸಿ ಸೆಕ್ಷನ್ 201 ಯಡಿಯಲ್ಲಿ 7 ವರ್ಷ ಶಿಕ್ಷೆ, 50,000ರು ದಂಡ ಹಾಕಲಾಗಿದೆ. ಪಾದ್ರಿ ಕೊಟ್ಟೂರ್ ಅವರು ಕ್ಯಾನ್ಸರ್ ಪೀಡಿತರಾಗಿದ್ದು, 71ವರ್ಷವಾಗಿದೆ. ಸೆಫಿ ಅವರು ವಯೋವೃದ್ಧ ತಂದೆ ತಾಯಿ ನೋಡಿಕೊಳ್ಳಬೇಕ, ಹೀಗಾಗಿ ಜೀವಾವಧಿ ಶಿಕ್ಷೆ ವಿಧಿಸಬೇಡಿ ಎಂದು ಅವರ ಪರ ವಕೀಲರು ಮಾಡಿದ ಮನವಿಯನ್ನು ಕೋರ್ಟ್ ತಿರಸ್ಕರಿಸಿದೆ.
ಸಿಸ್ಟರ್ ಅಭಯಾ ಪಾಲಕರಾಗಿ ಕರ್ತವ್ಯ ನಿರ್ವಹಿಸಬೇಕಿದ್ದ ಪಾದ್ರಿ ಥಾಮಸ್ ಹಾಗೂ ಸೆಫಿ ಅವರು ಐಪಿಸಿ ಸೆಕ್ಷನ್ 302, 449, 201 ಅಡಿಯಲ್ಲಿ ಎದುರಿಸುತ್ತಿರುವ ದೋಷಾರೋಪಣ ಸಾಬೀತಾಗಿದ್ದು, ಶಿಕ್ಷೆ ಪ್ರಮಾಣದಲ್ಲಿ ಬದಲಾವಣೆ ಸಾಧ್ಯವಿಲ್ಲ ಎಂದು ಜಡ್ಜ್ ಕೆ ಸನೀಲ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.