ಮೈಸೂರು, ಮೇ 28: ಯಲಹಂಕ ಫ್ಲೈಓವರ್ ಗೆ ಸಾವರ್ಕರ್ ಹೆಸರಿಡುವ ಸರ್ಕಾರದ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದ ಕಾಂಗ್ರೆಸ್ ಪಕ್ಷದವರನ್ನು ಸಂಸದ ಪ್ರತಾಪ ಸಿಂಹ ಇಂದು ತೀವ್ರ ತರಾಟೆಗೆ ತೆಗೆದುಕೊಂಡರು. ಜನ ಈಗಾಗಲೇ ಅವರನ್ನು ಮೂಲೆಗುಂಪು ಮಾಡಿದ್ದಾರೆ. ಇನ್ನಾದರೂ ತಮ್ಮ ಮನಸ್ಥಿತಿಯನ್ನು ಬದಲಿಸಿಕೊಳ್ಳದಿದ್ದರೆ ನಿರ್ನಾಮ ಆಗುವುದಂತೂ ಖಚಿತ ಎಂದು ಮಾಜಿ ಸಿಎಂಗಳಾದ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿಗೆ ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದರು. ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಸಾವರ್ಕರ್ ಅವರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ. ಇದು ಸ್ವಾತಂತ್ರ್ಯ ಹೋರಾಟ, ಸಿಪಾಯಿ ಧಂಗೆಯಲ್ಲ ಎಂಬುದನ್ನು ಜನರಿಗೆ ಮನವರಿಕೆ ಮಾಡಿದ ವ್ಯಕ್ತಿ ಅವರು. ಆ ವ್ಯಕ್ತಿ ಹೆಸರನ್ನು ಫ್ಲೈ ಓವರ್ಗೆ ಇಡಲು ಸಿಎಂ ನಿರ್ಧಾರ ತೆಗೆದುಕೊಂಡರೆ ಅದಕ್ಕೆ ಮೆಚ್ಚುಗೆ ವ್ಯಕ್ತಪಡಿಸದೇ ತಕರಾರು ತೆಗೆಯುವವರಿಗೆ ನಾಚಿಕೆಯಾಗಬೇಕು” ಎಂದು ಹರಿಹಾಯ್ದರು.
ಬಂಡೀಪುರ ನಾಗರಹೊಳೆ ಅರಣ್ಯಕ್ಕೂ ರಾಜೀವ್ ಗಾಂಧಿ ಹೆಸರು ಏಕೆ ಇಟ್ಟಿದ್ದಾರೆ? ಕನ್ನಡಿಗರ ಹೆಸರನ್ನೇ ಇಡಬೇಕಿತ್ತಲ್ಲವೇ. ಜನರು ಬುದ್ಧಿವಂತರಾಗಿದ್ದಾರೆ. ನೀವು ದಡ್ಡತನದಿಂದ ಹೊರಬನ್ನಿ. ಜನರು ದಡ್ಡರಲ್ಲ. ಅವರಲ್ಲಿ ತಿಳಿವಳಿಕೆ, ಬುದ್ಧಿವಂತಿಕೆಯಿದೆ. ರಚನಾತ್ಮಕ ರಾಜಕಾರಣ ಮಾಡಿ, ಕ್ಷುಲ್ಲಕ ವಿಚಾರಕ್ಕೆ ರಾಜಕೀಯ ಮಾಡಿದರೆ ಜನರು ಬುದ್ಧಿ ಕಲಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಾವರ್ಕರ್ ಹೆಸರಿಡಲು ವಿರೋಧ ವ್ಯಕ್ತಪಡಿಸುವವರು ಅಂಡಮಾನ್ ಜೈಲಿಗೆ ಹೋಗಿ ಸಾವರ್ಕರ್ ಇದ್ದ ಜಾಗವನ್ನು ಒಮ್ಮೆ ನೋಡಿಕೊಂಡು ಬರಲಿ. ಅವರ ಸಾಧನೆ, ತ್ಯಾಗ ಏನೆಂದು ತಿಳಿಯುತ್ತದೆ. ಆಗ ಅವರ ಬಗ್ಗೆ ವಿರೋಧ ವ್ಯಕ್ತಪಡಿಸುವುದನ್ನು ನಿಲ್ಲಿಸುತ್ತಾರೆ ಎಂದರು.