ಅಟ್ಲಾಂಟಾ, ಜೂನ್ 14: ಜಾರ್ಜ್ ಫ್ಲಾಯ್ಡ್ ದುರಂತ ಸಾವಿನ ವಿರುದ್ಧ ನಡೆದಿರುವ ಆಕ್ರೋಶಭರಿತ ಪ್ರತಿಭಟನೆ ಹತ್ತಿಕ್ಕಲು ಹೆಣಗುತ್ತಿರುವಾಗಲೇ ಮತ್ತೊಂದು ಪ್ರಮಾದವನ್ನು ಪೊಲೀಸರು ಎಸಗಿದ್ದಾರೆ. ಕಪ್ಪು ವರ್ಣೀಯನೊಬ್ಬ ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದಾನೆ. ಘಟನೆ ನಡೆದ 24ಗಂಟೆಯೊಳಗೆ ಅಟ್ಲಾಂಟಾ ಪೊಲೀಸ್ ಮುಖ್ಯಸ್ಥೆ ಎರಿಕಾ ಶೀಲ್ಡ್ಸ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
27 ವರ್ಷ ವಯಸ್ಸಿನ ರೇಶಾರ್ಡ್ ಬ್ರೂಕ್ಸ್ ಎಂಬ ವ್ಯಕ್ತಿ ವೆಂಡಿ ಎಂಬಲ್ಲಿ ಡ್ರೈ ವ್ ಥ್ರೂ ಬಳಿ ಕಾರಿನಲ್ಲಿ ನಿದ್ರಿಸುತ್ತಿದ್ದರು. ರಸ್ತೆ ಸಂಚಾರಕ್ಕೆ ಇದರಿಂದ ಅಡ್ಡಿಯಾಗಿದೆ. ಈ ಬಗ್ಗೆಇಬ್ಬರು ಪೊಲೀಸರು ಪ್ರಶ್ನೆಗಳು ಶುರು ಮಾಡಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ. ತಿಕ್ಕಾಟದಲ್ಲಿ ಪೊಲೀಸರ ಬಳಿ ಇದ್ದ ಇ ಶಾಕ್ ನೀಡುವ ಸಾಧನ ಟೇಸರ್(Taser) ಕಿತ್ತುಕೊಂಡು ಓಡಿದ್ದಾನೆ. ಇದರಿಂದ ಕೋಪಗೊಂಡು ಪೊಲೀಸರು ಆತನ ಮೇಲೆ ಗುಂಡಿಕ್ಕಿ ಕೊಂದಿದ್ದಾರೆ ಎಂದು ವರದಿಯಾಗಿದೆ.
ಬ್ರೂಕ್ಸ್ ಸಾವಿಗೆ ನ್ಯಾಯ ಕೋರಿ ಅನೇಕ ಮಂದಿ ಪ್ರತಿಭಟನಾಕಾರರು ಅಂತಾರಾಜ್ಯ 85 ಹೆದ್ದಾರಿಯನ್ನು ತಡೆದಿದ್ದಾರೆ. ವೆಂಡಿಯಲ್ಲಿ ಗಾಜುಗಳನ್ನು ಒಡೆದು, ಬೆಂಕಿ ಹಚ್ಚಿದ್ದಾರೆ. ಪರಿಸ್ಥಿತಿ ಕೈ ಮೀರಿದಾಗ ಪೊಲೀಸರು ಟಿಯರ್ ಗ್ಯಾಸ್, ಸ್ಮೋಕ್ ಬಾಂಬ್ ಪ್ರಯೋಗಿಸಿ ಗುಂಪನ್ನು ಚದುರಿಸಿದ್ದಾರೆ.