ನವದೆಹಲಿ, ಜೂನ್ 01 : ಲಾಕ್ ಡೌನ್ ಪರಿಣಾಮ ದೇಶದಲ್ಲಿ ನಿರುದ್ಯೋಗದ ಸಮಸ್ಯೆ ಹೆಚ್ಚಾಗುತ್ತಿದೆ. ತೆಲಂಗಾಣ, ಕೇರಳ ಮತ್ತು ತಮಿಳುನಾಡಿನಲ್ಲಿ ನಿರುದ್ಯೋಗದ ಪ್ರಮಾಣ ಹೆಚ್ಚಾಗಿದೆ. ದಕ್ಷಿಣ ಭಾರತದ ರಾಜ್ಯಗಳ ಅಂಕಿ ಸಂಖ್ಯೆಗಳು ಆತಂಕವನ್ನು ಮೂಡಿಸುತ್ತಿವೆ.
ಭಾರತೀಯ ಆರ್ಥಿಕತೆ ನಿಗಾ ಕೇಂದ್ರ (ಸಿಎಂಐಇ) ಬಿಡುಗಡೆ ಮಾಡಿರುವ ವರದಿಯ ಪ್ರಕಾರ ಕೇರಳದಲ್ಲಿ ಶೇ 9.5 ರಷ್ಟು ಹೆಚ್ಚಾಗಿದ್ದು, ಮೇ ತಿಂಗಳಿನಲ್ಲಿ ಶೇ 26.5ರಷ್ಟಾಗಿದೆ. ಏಪ್ರಿಲ್ನಲ್ಲಿ ಶೇ 17 ಮತ್ತು ಮಾರ್ಚ್ನಲ್ಲಿ ಶೇ 9ರಷ್ಟು ಪ್ರಮಾಣವಿತ್ತು.
ಇದುವರೆಗೂ ರಾಜ್ಯದಲ್ಲಿ ನಿರುದ್ಯೋಗದ ಪ್ರಮಾಣ ಒಂದಂಕಿಯಲ್ಲಿ ಇತ್ತು. 2019ರ ಮೇ ತಿಂಗಳಿನಲ್ಲಿ ಶೇ 6.4, 2018ರ ಸೆಪ್ಟೆಂಬರ್ನಲ್ಲಿ ಶೇ 4.3ರಷ್ಟಿತ್ತು. ಈ ವರ್ಷ ಲಾಕ್ ಡೌನ್ ಪರಿಣಾಮ ಅದು ಎರಡಂಕಿಗೆ ಏರಿಕೆಯಾಗಿದೆ.
ದಕ್ಷಿಣ ಭಾರತದ ಕೆಲವು ರಾಜ್ಯಗಳಲ್ಲಿ ನಿರುದ್ಯೋಗದ ಪ್ರಮಾಣ ಭಾರಿ ಏರಿಕೆಯಾಗಿದೆ. ಮಾರ್ಚ್ನಲ್ಲಿ ರಾಷ್ಟ್ರದಲ್ಲಿ ನಿರುದ್ಯೋಗದ ಪ್ರಮಾಣ ಶೇ 8.8ರಷ್ಟಿತ್ತು. ಆಗ ಕೇರಳದಲ್ಲಿ ಶೇ 9 ಅಂದರೆ ರಾಷ್ಟ್ರಕ್ಕಿಂತ ಹೆಚ್ಚಿನ ಮಟ್ಟದಲ್ಲಿತ್ತು.