ನವದೆಹಲಿ, ಮೇ 26: ”ಕೊರೊನಾ ತಡೆಗಟ್ಟಲು ಹೇರಲಾಗಿರುವ ಲಾಕ್ಡೌನ್ ನ ಗುರಿ ಮತ್ತು ಉದ್ದೇಶ ಸಂಪೂರ್ಣ ವಿಫಲವಾಗಿದೆ” ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಮಂಗಳವಾರ ವಿಡಿಯೋ ಕಾನ್ಪರೆನ್ಸ್ ಮೂಲಕ ನಡೆಸಿದ ಸುದ್ದಿಗೋಷ್ಠಿಯಲ್ಲಿ ಈ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದರು. ಲಾಕ್ಡೌನ್ ವಿಫಲತೆಯ ಬಗ್ಗೆ ಮಾತನಾಡಲು ಅವರು ಸುದ್ದಿಗೋಷ್ಠಿ ಕರೆದಿದ್ದರು.
“ಕಾಂಗ್ರೆಸ್ ಅಧಿಕಾರವಿರುವ ರಾಜ್ಯಗಳಲ್ಲಿ ಕೊರೊನಾ ತಡೆಗಟ್ಟಲು ನಮ್ಮಲ್ಲಿ ಒಂದು ತಂತ್ರವಿದೆ. ಆದರೆ, ಕೇಂದ್ರ ಸರ್ಕಾರವಿಲ್ಲದೆ ನಾವು ಕಾರ್ಯನಿರ್ವಹಿಸಲು ಸಾಧ್ಯವಿಲ್ಲ, ಕೇಂದ್ರ ಸರ್ಕಾರ ಸಹಕಾರ ನೀಡುತ್ತಿಲ್ಲ” ಎಂದು ಆರೋಪಿಸಿದ್ದಾರೆ.
”ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದರೂ ಲಾಕ್ಡೌನ್ ಸಡಿಲಗೊಳಿಸಲು ಹೊರಟಿರುವ ಏಕೈಕ ದೇಶ ಭಾರತವಾಗಿದೆ. ಹೆಚ್ಚುತ್ತಿರುವ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರದ ಕ್ರಿಯಾ ಯೋಜನೆ ಏನು ಎಂದು ಪ್ರಶ್ನಿಸಿರುವ ಅವರು, ಲಾಕ್ಡೌನ್ ಉದ್ದೇಶ ಈಡೇರಿಲ್ಲ” ಎಂದು ಗಂಭೀರ ಆರೋಪ ಮಾಡಿದರು.