ದೆಹಲಿಯ ರೈತ ಹೋರಾಟಕ್ಕೆ ದೇಶಾದ್ಯಂತ ಬೆಂಬಲ ವ್ಯಕ್ತವಾಗುತ್ತಿದೆ. ಎಲ್ಲ ವರ್ಗದ, ಎಲ್ಲಾ ವಯೋಮಾನದ, ಎಲ್ಲಾ ವೃತ್ತಿಯ ಜನರೂ ರೈತ ಚಳವಳಿಯ ಬಗ್ಗೆ ಕಾಳಜಿ ತೋರುತ್ತಿರುವುದನ್ನು ಕಾಣಬಹುದು.
ಅಂತೆಯೇ ಈ ಚಳವಳಿಗೆ ಅನೇಕ ರಾಜಕೀಯ ಪಕ್ಷಗಳೂ ಬೆಂಬಲ ಸೂಚಿಸಿವೆ. ಮುಂದಿನ ದಿನಗಳಲ್ಲಿ ಈ ಚಳವಳಿಯ ಫಸಲು ಕೊಯಿಲು ಮಾಡಿಕೊಳ್ಳುವರ್ಯಾರು ಎಂಬುದನ್ನು ಕಾದು ನೋಡಬೇಕಿದೆ.
ಕರ್ನಾಟಕದಲ್ಲಿ ರೈತ ಚಳುವಳಿ ಉತ್ತುಂಗದಲ್ಲಿದ್ದಾಗ ಅದರ ಫಸಲು ಕೊಯಿಲು ಮಾಡಿಕೊಂಡದ್ದು ಜನತಾ ಪಕ್ಷ. ‘ರೈತರಿಗೆ ಗುಂಡು ಹೊಡೆದ ಗುಂಡೂರಾಯರ ಪಕ್ಷಕ್ಕೆ ಓಟಿಲ್ಲ’ ಎಂಬ ರೈತ ಸಂಘದ ಘೋಷಣೆ ಜನತಾ ಪಕ್ಷ ಅಧಿಕಾರಕ್ಕೆ ಬರಲು ಕಾರಣವಾಗಿದ್ದು ಇತಿಹಾಸ. ಕರ್ನಾಟಕದಲ್ಲಿ ಕಾಂಗ್ರೇಸ್ಸೇತರ ಪಕ್ಷವನ್ನು ಅಧಿಕಾರಕ್ಕೆ ತರಲು ರೈತ ಚಳುವಳಿಯ ಕೊಡುಗೆ ದೊಡ್ಡದು.