ರಾಮನಗರ, ಮೇ 25: ಇಷ್ಟು ದಿನ ಗ್ರೀನ್ ಝೋನ್ ಎಂದು ನೆಮ್ಮದಿಯಾಗಿದ್ದ ರಾಮನಗರಕ್ಕೂ ಈಗ ಕೊರೊನಾ ಕಾಲಿಟ್ಟಿದೆ. ತಮಿಳುನಾಡಿನಿಂದ ಮಾಗಡಿಗೆ ವಾಪಸ್ ಬಂದಿದ್ದ ಎರಡು ವರ್ಷದ ಮಗುವಿನಲ್ಲಿ ಕೊರೊನಾ ದೃಢಪಟ್ಟಿದೆ. ಈ ಮಗುವಿನ ಕುಟುಂಬ ತಮಿಳುನಾಡಿನಿಂದ ಬಂದು ಮಾಗಡಿ ತಾಲ್ಲೂಕಿನ ಕುದೂರಿನ ಕ್ವಾರಟೈನ್ ಕೇಂದ್ರದಲ್ಲಿ ಇತ್ತು. ಕುಟುಂಬದವರೆಲ್ಲರ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಇಂದು ಪರೀಕ್ಷೆ ವರದಿ ಬಂದಿದ್ದು, ಈ ಮಗುವಿಗೆ ಕೊರೊನಾ ಇರುವುದು ದೃಢಪಟ್ಟಿದೆ. ಬೆಂಗಳೂರಿನ ಆಸ್ಪತ್ರೆಯಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಇದೀಗ ಮಗುವಿನ ಮನೆಯವರಿಗೆ ಕ್ವಾರಂಟೈನ್ ವಿಧಿಸಲಾಗಿದೆ. ಮಗುವಿನ ತಂದೆ, ತಾಯಿ, ಅಜ್ಜಿ, ಚಿಕ್ಕಮ್ಮ ಇವರನ್ನು ಕ್ವಾರಂಟೈನ್ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಸೋಂಕು ಪತ್ತೆ ಹಿನ್ನೆಲೆ ಮಾರಸಂದ್ರ ಗ್ರಾಮವನ್ನು ಸೀಲ್ ಡೌನ್ ಮಾಡಲು ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಆದೇಶಿಸಿದ್ದಾರೆ.
ಈ ನಡುವೆ ಮಾಗಡಿಯ ಕೆಎಸ್ ಆರ್ ಟಿಸಿ ಚಾಲಕರೊಬ್ಬರಿಗೂ ಕೊರೊನಾ ಶಂಕೆ ವ್ಯಕ್ತಗೊಂಡಿದೆ. ತುಮಕೂರಿನ ಬೆಳ್ಳಾವಿ ಮೂಲದ ಮಾಗಡಿ ಕೆಎಸ್ ಆರ್ ಟಿಸಿ ಡಿಪೋದ ನಿರ್ವಾಹಕರೊಬ್ಬರಲ್ಲಿ ಕೊರೊನಾ ಶಂಕೆ ವ್ಯಕ್ತವಾಗಿದ್ದು, ಐದು ದಿನಗಳ ಹಿಂದೆ ಕರ್ತವ್ಯಕ್ಕೆ ಹಾಜರಾಗಿದ್ದರು. ಮಾಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ಗಂಟಲು ದ್ರವ ತಪಾಸಣೆ ನಡೆಸಲಾಗಿತ್ತು. ಕೊರೊನಾ ವರದಿ ಬರುವ ಮುನ್ನವೇ ಡಿಪೋ ಮ್ಯಾನೇಜರ್ ಕರ್ತವ್ಯಕ್ಕೆ ನಿಗದಿ ಮಾಡಿದ್ದರು. ನಿರ್ವಾಹಕರಲ್ಲದೇ, ರಾಮನಗರದ ಬಿಡದಿ ಪೊಲೀಸ್ ಠಾಣೆ ವ್ಯಾಪ್ತಿ ಬಂದೊಬಸ್ತ್ ಗೆ ಬಂದಿದ್ದ ಪೊಲೀಸ್ ಗೆ ಕೊರೊನಾ ಪಾಸಿಟಿವ್ ದೃಢಪಟ್ಟಿರುವುದು ಜಿಲ್ಲೆಯಲ್ಲಿ ಆತಂಕ ಉಂಟು ಮಾಡಿದೆ. ಇವರು ಮುತ್ತಪ್ಪ ರೈ ಶವ ಯಾತ್ರೆಯ ಬಂದೋಬಸ್ತ್ ನಲ್ಲಿ ಪಾಲ್ಗೊಂಡಿದ್ದಲ್ಲದೇ ರಾಮನಗರದ ಚಾಮುಂಡೇಶ್ವರಿ ಕಲ್ಯಾಣ ಮಂಟಪದಲ್ಲಿ 3 ದಿನ ವಾಸ್ತವ್ಯ ಹೂಡಿದ್ದರು ಎನ್ನಲಾಗಿದೆ. ರಾಮನಗರದ ರೇಷ್ಮೆ ಗೂಡಿನ ಮಾರುಕಟ್ಟೆ ಮತ್ತು ರಾಮನಗರ ಎಪಿಎಂಸಿ ಮಾರುಕಟ್ಟೆಯ ಬಂದೋಬಸ್ತ್ ಡ್ಯೂಟಿ ಮಾಡಿದ್ದರು ಎಂದು ತಿಳಿದುಬಂದಿದೆ.