ರಾಮನಗರ (ಮೇ 9): ಲಾಕ್ಡೌನ್ ಹಿನ್ನೆಲೆ ಅಜ್ಜಿಯ ಮನೆಗೆ ಬಂದಿದ್ದ 3 ವರ್ಷದ ಗಂಡು ಮಗುವನ್ನು ಚಿರತೆಯೊಂದು ಹೊತ್ತೊಯ್ದು, ಕೊಂದುಹಾಕಿರುವ ದಾರುಣ ಘಟನೆ ರಾಮನಗರದಲ್ಲಿ ನಡೆದಿದೆ. ಮನೆಯೊಳಗೆ ಮಲಗಿದ್ದ ಮಗುವನ್ನು ಚಿರತೆ ಕೊಂದುಹಾಕಿದೆ. ಕೊರೋನಾದಿಂದ ಶಾಲೆಗೆ ರಜೆ ಎಂದು ಅಜ್ಜಿ ಮನೆಗೆ ಬಂದಿದ್ದ 3 ವರ್ಷದ ಬಾಲಕ ನಿನ್ನೆ ಕಳೆದ ರಾತ್ರಿ ಎಂದಿನಂತೆ ತಂದೆ-ತಾಯಿಯ ಜೊತೆ ಮಲಗಿದ್ದ. ಮಳೆಯಿಂದಾಗಿ ಸೆಕೆ ಹೆಚ್ಚಾಗಿದ್ದ ಕಾರಣದಿಂದಾಗಿ ಮನೆಯ ಬಾಗಿಲು ತೆರೆದು ಎಲ್ಲರೂ ಮಲಗಿದ್ದರು. ತಡರಾತ್ರಿ ಮನೆಗೆ ನುಗ್ಗಿದ ಚಿರತೆ ಮಲಗಿದ್ದ ಮಗುವನ್ನು ಹೊತ್ತೊಯ್ದು ಅರೆಬರೆ ತಿಂದು ಕೊಂದಿದೆ.
ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಕದರಯ್ಯನಪಾಳ್ಯ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಚಂದ್ರಪ್ಪ ಮಂಗಳಗೌರಿ ದಂಪತಿಯ ಮೂರು ವರ್ಷದ ಮಗು ಹೇಮಂತ್ ಚಿರತೆ ದಾಳಿಗೆ ಬಲಿಯಾಗಿದ್ದಾನೆ. ಮಂಗಳಗೌರಿ ತನ್ನ ತಾಯಿಯ ಮನೆಯಾದ ಕದರಯನಪಾಳ್ಯ ಗ್ರಾಮಕ್ಕೆ ವಾರದ ಹಿಂದೆಯಷ್ಟೇ ರಜೆ ಕಳೆಯಲು ಬಂದಿದ್ದರು. ರಜೆ ಸಿಕ್ಕಾಗಲೆಲ್ಲ ಈ ಗ್ರಾಮಕ್ಕೆ ಬಂದು ಸಮಯ ಕಳೆಯುತ್ತಿದ್ದರು. ಅದರಂತೆ ವಾರದ ಹಿಂದೆ ತಾಯಿ ಮನೆಗೆ ಮಂಗಳಗೌರಿ ಹಾಗೂ ಇಬ್ಬರು ಮಕ್ಕಳು ಬಂದಿದ್ದರು.
ನಿನ್ನೆ ರಾತ್ರಿ ಸುರಿದ ಜೋರು ಮಳೆಯಿಂದಾಗಿ ವಿದ್ಯುತ್ ಕಡಿತವಾಗಿತ್ತು. ಈ ಕಾರಣಕ್ಕೆ ಸೆಕೆ ಆಗುತ್ತಿದೆ ಎಂದು ಬಾಗಿಲು ತೆರೆದು ಎಲ್ಲರೂ ಮಲಗಿದ್ದರು. ಆಗ ಮನೆಯೊಳಗೆ ನುಗ್ಗಿದ ಚಿರತೆ ಮಗುವನ್ನು ಹೊತ್ತೊಯ್ದಿದೆ. ಕತ್ತಲೆಯಲ್ಲಿ ಮಗುವನ್ನು ಹುಡುಕಾಡಿದಾಗ ಮನೆಯಿಂದ ಸುಮಾರು 60 ಮೀಟರ್ ದೂರದ ಪೊದೆಯಲ್ಲಿ ಮಗು ಶವವಾಗಿ ಪತ್ತೆಯಾಗಿದೆ. ಮಗುವನ್ನು ಎಳೆದುಕೊಂಡು ಹೋದ ಚಿರತೆ ಅರೆಬರೆ ತಿಂದು ಹೋಗಿದೆ. ಇದರಿಂದಾಗಿ ಮಗುವಿನ ದೇಹ ಸಂಪೂರ್ಣ ಛಿಧ್ರವಾಗಿದೆ.
ಅಂದಹಾಗೆ, ಮಾಗಡಿ ತಾಲೂಕಿನಲ್ಲಿ ಚಿರತೆ ಕಾಟ ಬಹಳಷ್ಟು ಹೆಚ್ಚಾಗಿದೆ. ಬೇಸಿಗೆಯಾಗಿರುವುದರಿಂದ ಆಹಾರ ಹಾಗೂ ನೀರನ್ನು ಅರಸಿ ಚಿರತೆ ಹಾಗೂ ಕರಡಿಗಳು ನಾಡಿಗೆ ಬರುತ್ತದೆ. ಇದೇ ಕಾರಣದಿಂದಾಗಿ ಪ್ರಾಣಿ ಮೇಲೆ ದಾಳಿ ಮಾಡಲು ಬಂದಿದ್ದ ಚಿರತೆ ಮಗು ಸಿಕ್ಕಿತ್ತು ಎಂಬ ಕಾರಣಕ್ಕೆ ಎಳೆದುಕೊಂಡು ಹೋಗಿ ಕೊಂದು ಹಾಕಿದೆ. ವಿಷಯ ತಿಳಿದು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ಮಾಗಡಿ ಶಾಸಕ ಎ. ಮಂಜುನಾಥ್ ಭೇಟಿ ನೀಡಿ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ. ಮಗು ಕಳೆದುಕೊಂಡ ಕುಟುಂಬಸ್ಥರನ್ನು ಸಮಾಧಾನಪಡಿಸಿದ ಶಾಸಕರು ಸರ್ಕಾರದ ಮೇಲೆ ಒತ್ತಡ ಹಾಕಿ ಆದಷ್ಟು ಬೇಗ ಪರಿಹಾರ ಕೊಡಿಸುವುದಾಗಿ ಎಂದು ಭರವಸೆ ನೀಡಿದ್ದಾರೆ.