ಎಲ್ಲೆಲ್ಲೂ ಕೊರೊನಾ ಸೋಂಕು ಅಬ್ಬರಿಸಿ ಬೊಬ್ಬಿರಿಯುತ್ತಿದೆ. ಇಂತಹ ಸಂದರ್ಭದಲ್ಲೇ ಮಂಗೋಲಿಯಾದ ಆರೋಗ್ಯ ವ್ಯವಸ್ಥೆ ಮೇಲೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ವೀಡಿಯೋ ತುಣುಕೊಂದು ಮಂಗೋಲಿಯಾ ಆರೋಗ್ಯ ವ್ಯವಸ್ಥೆಯನ್ನ ಬಿಡಿಸಿ ಹೇಳುತ್ತಿತ್ತು. ಅಷ್ಟಕ್ಕೂ ಬಾಣಂತಿ ಹಾಗೂ ಹಸುಗೂಸನ್ನು ನಡೆಸಿಕೊಂಡ ರೀತಿ ಕಿಚ್ಚು ಹಚ್ಚಿತ್ತು. ಕೊರೊನಾ ಸೋಂಕಿತೆಯೊಬ್ಬರು ಕೆಲ ದಿನಗಳ ಹಿಂದಷ್ಟೇ ಮಗುವಿಗೆ ಜನ್ಮ ನೀಡಿದ್ದರು.
ಆದರೆ ಇವರನ್ನು ಚಿಕಿತ್ಸೆಗೆ ಕರೆತರುವ ಸಂದರ್ಭದಲ್ಲಿ, ಆಕೆ ಹಾಗೂ ಮಗುವನ್ನ ಯಾವುದೇ ಮುಂಜಾಗ್ರತಾ ಕ್ರಮವಿಲ್ಲದೆ ಚಿಕಿತ್ಸೆ ನೀಡಲಾಗಿತ್ತು. ಮಂಗೋಲಿಯಾ ಉತ್ತರ ಧ್ರುವಕ್ಕೆ ಹತ್ತಿರದಲ್ಲೇ ಇರುವ ದೇಶ. ಹೀಗಾಗಿ ಸದ್ಯ ಅಲ್ಲಿನ ವಾತಾವರಣ ಮೈನಸ್ 25ರವರೆಗೂ ಇಳಿದಿದೆ. ಇಂತಹ ವಾತಾವರಣದಲ್ಲಿ ತಾಯಿ ಹಾಗೂ ಮಗುವನ್ನು ಬೆಚ್ಚಗೆ ಇಡಬೇಕಿತ್ತು. ಆದರೆ ಮಂಗೋಲಿಯಾದ ಆಸ್ಪತ್ರೆಯಲ್ಲಿ ತಾಯಿ-ಮಗುವನ್ನು ನಡೆಸಿಕೊಂಡ ರೀತಿ ತೀವ್ರ ಟೀಕೆಗೆ ಗುರಿಯಾಗಿದೆ. ಈ ಕಾರಣಕ್ಕೆ ದೊಡ್ಡ ಮಟ್ಟದ ಹೋರಾಟ ನಡೆದಿದ್ದು, ಸಾವಿರಾರು ಯುವಕರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ಇದು ನನ್ನ ತಪ್ಪು ಎಂದು ಮಂಗೋಲಿಯಾ ಪ್ರಧಾನಿ ಖುರೆಲ್ಸುಖ್ ಉಖ್ನಾ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.