ಮೈಸೂರು, ಫೆಬ್ರವರಿ 16; “ಎಸ್. ಟಿ. ಸೋಮಶೇಖರ್ ಬಂದ ಮೇಲೆ ಮೈಸೂರಿನ ಅಭಿವೃದ್ಧಿಗೆ 5 ರೂಪಾಯಿ ಅನುದಾನ ತಂದಿಲ್ಲ. ಐದು ರೂಪಾಯಿ ತಂದಿರೋದು ಸಾಬೀತು ಮಾಡಿದರೆ ನಾನೇ ಸೋಮಶೇಖರ್ ಪರವಾಗಿ ಪ್ರಚಾರ ಮಾಡುತ್ತೇನೆ” ಎಂದು ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಸವಾಲು ಹಾಕಿದರು.
ಮಂಗಳವಾರ ಮೈಸೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಲಕ್ಷ್ಮಣ್, “ರಾಜ್ಯ ಬಜೆಟ್ ಬಗ್ಗೆ ಮುಖ್ಯಮಂತ್ರಿಗಳು ತಲೆಕೆಡಿಸಿಕೊಂಡಿಲ್ಲ. ಸಿದ್ದರಾಮಯ್ಯ ಅವಧಿಯಲ್ಲಿ ಸತತ 45ದಿನಗಳು ವಿವಿಧ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದರು. ಯಡಿಯೂರಪ್ಪ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿಲ್ಲ” ಎಂದು ದೂರಿದರು.
“ಕೇಂದ್ರ ಸರ್ಕಾರದಿಂದ ಅನುದಾನ ಪಡೆಯುವಲ್ಲಿ ರಾಜ್ಯ ವಿಫಲವಾಗಿದೆ. ಸುಮ್ಮನೆ ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಈ ಬಾರಿಯ ಕೇಂದ್ರದ ಬಜೆಟ್ ರಾಜ್ಯಕ್ಕೆ ಶೂನ್ಯ ಅನುದಾನ ನೀಡಿದೆ. ಪಕ್ಕದ ರಾಜ್ಯಕ್ಕೆ 6 ಲಕ್ಷ ಕೋಟಿಯನ್ನು ಚುನಾವಣೆ ಮುಂದಿಟ್ಟುಕೊಂಡು ಹಣ ನೀಡಲಾಗಿದೆ” ಎಂದು ಆರೋಪಿಸಿದರು.