ಮೈಸೂರು, ಮೇ 16: ಕೋವಿಡ್ 19 ಸಂದರ್ಭದಲ್ಲಿ ಜೀವದ ಹಂಗು ತೊರೆದು ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ತಲಾ 3 ಸಾವಿರ ರೂಪಾಯಿಯನ್ನು ಸಹಕಾರ ಇಲಾಖೆ ವತಿಯಿಂದ ಕೊಡುತ್ತಿದ್ದೇವೆ. ಇದಕ್ಕಾಗಿ ಒಟ್ಟು 12 ಕೋಟಿ 37 ಲಕ್ಷ ರೂಪಾಯಿ ಖರ್ಚು ಆಗಲಿದೆ ಎಂದು ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ರಾಜ್ಯದ 40,500 ಆಶಾ ಕಾರ್ಯಕರ್ತರಿಗೆ ಅನುಕೂಲವಾಗುವ ತಲಾ 3 ಸಾವಿರ ರೂಪಾಯಿ ಸಹಾಯಧನ ವಿತರಣೆ ಕಾರ್ಯಕ್ರಮಕ್ಕೆ ಸಾಂಕೇತಿಕವಾಗಿ 180 ಜನರಿಗೆ ಮೈಸೂರಿನಲ್ಲಿ ವಿತರಣೆ ಮಾಡುವ ಮೂಲಕ ಸಚಿವರು ಈ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು. ಮಾರಣಾಂತಿಕ ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಮೈಸೂರು ಮಾದರಿಯಾಗಿದ್ದು, ಎಲ್ಲಾ 90 ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ.
ಹೀಗಾಗಿ ಕೊರೊನಾ ವಿರುದ್ಧ ಹೋರಾಡಿದ ರಾಜ್ಯದ ಎಲ್ಲ ಆಶಾ ಕಾರ್ಯಕರ್ತೆಯರಿಗೆ ಸಹಾಯಧನ ವಿತರಣೆ ಮಾಡುವ ಬಗ್ಗೆ ಮುಖ್ಯಮಂತ್ರಿಗಳು ಕೇಳಿದಾಗ ಇಲಾಖೆ ವತಿಯಿಂದಲೇ ಹಣವನ್ನು ಭರಿಸುವುದಾಗಿ ತಿಳಿಸಿದೆ. ನಂತರ ಶುಕ್ರವಾರ ಮುಖ್ಯಮಂತ್ರಿಗಳು ಸಹಾಯಧನದ ಬಗ್ಗೆ ಘೋಷಿಸಿದರು ಎಂದು ತಿಳಿಸಿದರು.
ಕೊರೊನಾದಂತಹ ಸೋಂಕು ಹರಡುತ್ತಿರುವ ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಅವರು ಎಸಿ ಕೊಠಡಿಯಲ್ಲಿ ಕೂರದೇ ಅವಿರತವಾಗಿ ಶ್ರಮ ಹಾಕಿದ್ದಾರೆ. ಇವರ ಜೊತೆ ಅಧಿಕಾರಿಗಳು, ವೈದ್ಯರು, ಆಶಾ ಕಾರ್ಯಕರ್ತೆಯರು ಸೇರಿದಂತೆ ಹಲವರ ಶ್ರಮವಿದೆ. ಮೈಸೂರು ಕೊರೊನಾ ಮುಕ್ತವಾಗಬೇಕಾದರೆ ಇವರೆಲ್ಲರ ಶ್ರಮ ಇದೆ ಎಂದು ನಾನು ಸಭೆಯ ವೇಳೆ ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿದೆ. ಹಾಗಾಗಿ ಅವರೂ ಕೊರೊನಾ ಮುಕ್ತ ರಾಜ್ಯಕ್ಕಾಗಿ ಹೋರಾಡಿದವರಿಗೆ ಅಭಿನಂದನೆ ಸಲ್ಲಿಸಬೇಕು ಎಂದು ಅಭಿಪ್ರಾಯಪಟ್ಟರು. ಈ ಹಿನ್ನೆಲೆಯಲ್ಲಿ ತಾವು ಮೈಸೂರಿನಿಂದಲೇ ಆ ಕೆಲಸವನ್ನು ಪ್ರಾರಂಭ ಮಾಡಿದ್ದಾಗಿ ಸಚಿವರು ತಿಳಿಸಿದರು. ಮೈಸೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಮತ್ತು ಮೈಸೂರು ಜಿಲ್ಲೆ ಸಹಕಾರ ಹಾಲು ಒಕ್ಕೂಟದ ವತಿಯಿಂದ ಜಿಲ್ಲೆಯ ಆಶಾ ಕಾರ್ಯಕರ್ತೆಯರಿಗೆ ಒಟ್ಟು 35 ಲಕ್ಷ ರೂಪಾಯಿ ಸಹಾಯಧನವನ್ನು ಸಚಿವರು ವಿತರಿಸಿದರು.