ದೆಹಲಿ, ಮೇ 22: ಸಾಂಕ್ರಾಮಿಕ ರೋಗ ಕೊರೊನಾ ವೈರಸ್ ಮನುಷ್ಯನಿಂದ ಇನ್ನೊಬ್ಬ ಮನುಷ್ಯನಿಗೆ ವೇಗವಾಗಿ ಹರುಡುತ್ತಿದೆ. ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಪಾರ್ಥಿವ ಶರೀರದಿಂದಲೂ ಸೋಂಕು ಹರಡಬಹುದು ಎಂಬ ಆತಂಕ ಇದೆ.
ಕೊರೊನಾ ಸೋಂಕಿಂದ ಮೃತಪಟ್ಟ ವ್ಯಕ್ತಿಯ ಅಂತ್ಯ ಸಂಸ್ಕಾರ ಮಾಡಲು ಕುಟುಂಬದವರಿಗೆ ಅವಕಾಶ ಕೊಡಲಾಗುತ್ತಿಲ್ಲ. ಜಿಲ್ಲಾಡಳಿತದ ನೇತೃತ್ವದಲ್ಲಿ ಅಂತ್ಯಕ್ರಿಯೆ ಮಾಡಲಾಗುತ್ತಿದೆ. ವಿದೇಶಗಳಲ್ಲಿ ಕೊರೊನಾ ಸೋಂಕಿನಿಂದ ಸತ್ತವರ ಮೃತದೇಹಗಳನ್ನು ರಾಶಿರಾಶಿಯಾಗಿ ಮಣ್ಣಿನಲ್ಲಿ ಮುಚ್ಚಿರುವ ಘಟನೆಗಳು ವರದಿಯಾಗಿದೆ.
ಇದೀಗ, ಕೊರೊನಾ ವೈರಸ್ನಿಂದ ಸತ್ತ ವ್ಯಕ್ತಿಯ ಮೃತ ದೇಹದ ಮೇಲೆ ಸಂಶೋಧನೆ ಮಾಡಲು ವಿಜ್ಞಾನಿಗಳು ಮುಂದಾಗಿದ್ದಾರೆ. ದೆಹಲಿ ಏಮ್ಸ್ ಆಸ್ಪತ್ರೆಯ ವೈದ್ಯರು ಈ ಕುರಿತು ಅಧ್ಯಯನ ಮಾಡಲು ಚಿಂತಿಸಿದ್ದಾರೆ.
ದೇಹದ ಒಳಗೆ ವೈರಸ್ ಹೋದ ಮೇಲೆ ಇತರೆ ಅಂಗಾಂಗಗಳ ಮೇಲೆ ಯಾವ ರೀತಿ ಪರಿಣಾಮ ಬೀರುತ್ತೆ ಎಂಬುದನ್ನು ತಿಳಿಯಲು ಭಾರತೀಯ ವೈದ್ಯರು ಮುಂದಾಗಿದ್ದಾರೆ. ಈ ಅಧ್ಯಯನ ಮಾಡುವುದಕ್ಕಾಗಿ ಸತ್ತವರ ಕಾನೂನು ಉತ್ತರಾಧಿಕಾರಿಗಳಿಂದ ಅನುಮತಿ ಪಡೆಯಲಾಗುವುದು. ರೋಗಶಾಸ್ತ್ರ ಮತ್ತು ಸೂಕ್ಷ್ಮ ಜೀವವಿಜ್ಞಾನದಂತಹ ಇನ್ನೂ ಅನೇಕ ವಿಭಾಗಗಳು ಅಧ್ಯಯನದಲ್ಲಿ ಭಾಗಿಯಾಗಲಿವೆ ಎಂದು ಡಾ. ಸುಧೀರ್ ಗುಪ್ತಾ ಮಾಹಿತಿ ನೀಡಿದ್ದಾರೆ.
ವೈಜ್ಞಾನಿಕ ಲೋಕದ ವಿಶ್ಲೇಷಣೆ ಅಥವಾ ಈ ಹಿಂದಿನ ಅಧ್ಯಯನಗಳ ಪ್ರಕಾರ, ಮೃತ ವ್ಯಕ್ತಿಯ ದೇಹದಲ್ಲಿ ಉಳಿದಕೊಂಡಿರುವ ವೈರಸ್ಗಳ ಕಾಲಾವಧಿ ಬಗ್ಗೆ ನಿಖರವಾದ ಮಾಹಿತಿ ಇಲ್ಲ. ಹಾಗಾಗಿ, ಮೃತ ಪಟ್ಟ ನಂತರವೂ ಆ ದೇಹದ ವಿಚಾರದಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಅನುರಿಸಬೇಕಾಗಿದೆ. ಶವಪರೀಕ್ಷೆ ವೇಳೆಯೂ ವೈದ್ಯರು, ಸಿಬ್ಬಂದಿಗಳು ರೋಗನಿವಾರಕ ಔಷಧ ಬಳಸುವುದು ಉತ್ತಮ ಎಂದು ಐಸಿಎಂಆರ್ ವಿವರಿಸಿತ್ತು.