ನವದೆಹಲಿ, ಮೇ 30 : ದೆಹಲಿ-ಮಾಸ್ಕೋ ವಿಮಾನ ಮಾರ್ಗ ಮಧ್ಯೆಯೇ ವಾಪಸ್ ಆದ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಒಂದೇ ಭಾರತ್ ಮಿಷನ್ ಅಡಿ ಭಾರತೀಯರನ್ನು ಕರೆತರಲು ಹೋಗುತ್ತಿದ್ದ ವಿಮಾನದ ಪೈಲೆಟ್ಗೆ ಕೊರೊನಾ ವೈರಸ್ ಸೋಂಕು ಇರುವುದು ದೃಢಪಟ್ಟಿತ್ತು.
ನಾಗರಿಕ ವಿಮಾನಯಾನ ಪ್ರಧಾನ ನಿರ್ದೇಶನಾಲಯ ಎ320 ವಿಮಾನ ವಾಪಸ್ ಆದ ಬಗ್ಗೆ ತನಿಖೆಗೆ ಆದೇಶ ನೀಡಿದೆ. ವಿಮಾನದ ಪೈಲೆಟ್ನ ಕೋವಿಡ್ – 19 ಪರೀಕ್ಷೆ ವರದಿ ಬರುವ ಮೊದಲೇ ವಿದೇಶಕ್ಕೆ ತೆರಳಲು ಅನುಮತಿ ಸಿಕ್ಕಿದ್ದು ಹೇಗೆ? ಎಂದು ತನಿಖೆ ನಡೆಯಲಿದೆ.
ದೆಹಲಿಯಿಂದ ಮಾಸ್ಕೋಗೆ ಭಾರತೀಯರನ್ನು ಕರೆತರಲು ಹೊರಟಿದ್ದ ವಿಮಾನದಲ್ಲಿ ಯಾವುದೇ ಪ್ರಯಾಣಿಕರು ಇರಲಿಲ್ಲ. ಉಜ್ಬೇಕಿಸ್ಥಾನ್ ವಾಯುನೆಲೆ ಬಳಿ ವಿಮಾನ ಇದ್ದಾಗ ಪೈಲೆಟ್ಗೆ ಕೋವಿಟ್ – 19 ಸೋಂಕು ಇರುವುದು ಖಚಿತವಾಗಿದ್ದು, ತಕ್ಷಣ ವಿಮಾನವನ್ನು ವಾಪಸ್ ಕರೆಸಿಕೊಳ್ಳಲಾಗಿದೆ.
“ಇಬ್ಬರು ಪೈಲೆಟ್ಗಳ ಪೈಕಿ ಒಬ್ಬರಿಗೆ ಸೋಂಕು ತಗುಲಿರುವುದು ಖಚಿತವಾದ ತಕ್ಷಣ ವಿಮಾನವನ್ನು ವಾಪಸ್ ಕರೆಸಿಕೊಳ್ಳಲಾಗಿದೆ. ಶನಿವಾರ ಮಧ್ಯಾಹ್ನ 12.30ಕ್ಕೆ ವಿಮಾನ ದೆಹಲಿಯಲ್ಲಿ ಲ್ಯಾಂಡ್ ಆಗಿದೆ. ಎಲ್ಲಾ ಸಿಬ್ಬಂದಿಗಳನ್ನು ಕ್ವಾರಂಟೈನ್ಗೆ ಕಳಿಸಲಾಗಿದೆ. ಮಾಸ್ಕೋಗೆ ಬೇರೆ ವಿಮಾನ ಕಳಿಸಲಾಗಿದೆ” ಎಂದು ಏರ್ ಇಂಡಿಯಾ ಹೇಳಿದೆ.