ಮಂಗಳೂರು, ಫೆಬ್ರವರಿ 19; ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ನವಾಝ್ ಹತ್ಯೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಆರೋಪಿಗಳನ್ನು ಬಂಧಿಸಲಾಗಿದೆ. ಸುರತ್ಕಲ್ ಮತ್ತು ಮಂಗಳೂರು ಸಿಸಿಬಿ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಫೆಬ್ರವರಿ 10ರಂದು ನವಾಝ್ ಅಲಿಯಾಸ್ ಪಿಂಕಿ ನವಾಝ್ ಹತ್ಯೆ ಮಾಡಲು ಪ್ರಯತ್ನ ನಡೆದಿತ್ತು.
ಬಂಧಿತ ಆರೋಪಿಗಳನ್ನು ಪ್ರಕಾಶ್ ಭಂಡಾರಿ (29), ಶಾಕೀಬ್ (29), ಶೈಲೇಶ್ ಪೂಜಾರಿ (19), ಹನೀಫ್ (20), ಸುವಿನ್ ಕಾಂಚನ್ (23), ಲಕ್ಷ್ಮೀಶ್ (26), ಅಹ್ಮದ್ ಸಾದಿಕ್ (23), ನಿಸಾರ್ ಹುಸೈನ್ (29), ರಂಜನ್ ಶೆಟ್ಟಿ (24) ಎಂದು ಗುರುತಿಸಲಾಗಿದೆ.
ಪಿಂಕಿ ನವಾಝ್ ಹತ್ಯೆಯತ್ನ ಪ್ರಕರಣದ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು ಹತ್ಯೆ ಯತ್ನ ನಡೆಸಿದ ನಾಲ್ವರು, ಸಹಕಾರ ನೀಡಿದ ಐದು ಆರೋಪಿಗಳನ್ನು ಬಂಧಿಸಿದ್ದಾರೆ.