ಬೆಂಗಳೂರು, ಜೂನ್.01: ನೊವೆಲ್ ಕೊರೊನಾ ವೈರಸ್ ಸೋಂಕು ಯಾವಾಗ ಯಾರಿಗೆ ಹೇಗೆ ಅಂಟಿಕೊಳ್ಳುತ್ತೆ ಎನ್ನುವುದನ್ನು ಊಹಿಸುವುದಕ್ಕೂ ಆಗುತ್ತಿಲ್ಲ. ಬೆಂಗಳೂರಿನಲ್ಲಿ ಅಂಥದ್ದೇ ಮತ್ತೊಂದು ಘಟನೆ ಸೋಮವಾರ ಬೆಳಕಿಗೆ ಬಂದಿದೆ.
ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಯೊಬ್ಬರಿಗೆ ಮಹಾಮಾರಿ ಕೊರೊನಾ ವೈರಸ್ ಅಂಟಿಕೊಂಡಿರುವುದು ವೈದ್ಯಕೀಯ ತಪಾಸಣೆ ವೇಳೆ ದೃಢಪಟ್ಟಿದೆ. ಬೆಂಗಳೂರು ಕೇಂದ್ರ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅಧಿಕಾರಿಗೆ ಮಹಾಮಾರಿ ಅಂಟಿಕೊಂಡಿದ್ದು ಮತ್ತಷ್ಟು ಆಂತಕವನ್ನು ಹೆಚ್ಚಿಸಿದೆ.
ಬಿಬಿಎಂಪಿ ಕೇಂದ್ರ ಕಚೇರಿಯ ನೆಲ ಮಹಡಿ ಮತ್ತು ಮೊದಲ ಮಹಡಿಯನ್ನು ಸಂಪೂರ್ಣ ಸ್ಯಾನಿಟೈಸ್ ಮಾಡಲಾಗಿದೆ. ಮುಂದಿನ ಎರಡು ದಿನಗಳ ಕಾಲ ಕಚೇರಿಯನ್ನು ಬಂದ್ ಮಾಡಲು ತೀರ್ಮಾನಿಸಿದ್ದು, ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.