Ultimate magazine theme for WordPress.

ಬಿಜೆಪಿ ಬಂಡಾಯ ಸಭೆ ಬೆನ್ನಲ್ಲೆ ಯಡಿಯೂರಪ್ಪರಿಗೆ ಅಮಿತ್ ಶಾ ದೂರವಾಣಿ ಕರೆ!

0

ಬೆಂಗಳೂರು, ಮೇ 30: ಕೊರೊನಾವೈರಸ್, ಲಾಕ್‌ಡೌನ್‌ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಹೊಸ ಸಂಕಷ್ಟ ಎದುರಾಗಿದೆ. ರಾಜ್ಯ ಸಂಪುಟ ವಿಸ್ತರಣೆ ಬಳಿಕ ಮೊದಲ ಬಾರಿ ಬಿಜೆಪಿ ನಾಯಕರು ಬಂಡಾಯ ಸಭೆ ನಡೆಸಿದ್ದಾರೆ. ಬೆಳಗಾವಿ ಜಿಲ್ಲಾ ಬಿಜೆಪಿ ನಾಯಕರ ನೇತೃತ್ವದಲ್ಲಿ ಬಿಜೆಪಿ ಹಿರಿಯ ಶಾಸಕರು ಬಂಡಾಯ ಸಭೆ ನಡೆಸಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಹಿಂದೆಯೂ ಕೂಡ ಬೆಳಗಾವಿ ಜಿಲ್ಲೆಯ ಅಸಮಾಧಾನದಿಂದಲೇ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನವಾಗಿದ್ದನ್ನು ನೆನಪಿಸಿಕೊಳ್ಳಬಹುದು. ಹೀಗಾಗಿ ಹಿರಿಯರ ಬಂಡಾಯ ರಾಜ್ಯ ಬಿಜೆಪಿ ಸರ್ಕಾರಕ್ಕೆ ಎಚ್ಚರಿಕೆ ಗಂಟೆಯಾಗಿದೆ. ರಾಜ್ಯಸಭಾ ಚುನಾವಣೆ ನೆಪದಲ್ಲಿ ಆರಂಭವಾಗಿರುವ ಬಂಡಾಯ ಇದೀಗ ನಾಯಕತ್ವ ಬದಲಾವಣೆ ಬೇಡಿಕೆಗೆ ಬಂದು ನಿಂತಿದೆ. ಕೊರೊನಾ ವೈರಸ್ ಸಂಕಷ್ಟದ ಸಂದರ್ಭದಲ್ಲಿ ಬಂಡಾಯ ಎದ್ದಿರುವುದನ್ನೂ ಹಿರಿಯ ಶಾಸಕರು ಸಮರ್ಥನೆ ಮಾಡಿಕೊಂಡಿದ್ದಾರೆ. ಅದಕ್ಕೆ ಕೊಟ್ಟಿರುವ ಕಾರಣಗಳು ವಿಚಿತ್ರವಾಗಿವೆ. ಈ ಸಂದರ್ಭದಲ್ಲಿ ಸಿಎಂ ಯಡಿಯೂರಪ್ಪ ಅವರಿಗೆ ಕೇಂದ್ರ ಗೃಹಸಚಿವ ಅಮಿತ್ ಶಾ ದೂರವಾಣಿ ಕರೆ ಮಾಡಿರುವುದು ಮತ್ತಷ್ಟು ಗೊಂದಲಕ್ಕೆ ಕಾರಣವಾಗಿದೆ.

ಕೊರೊನಾ ವೈರಸ್ ಸಂಕಷ್ಟದ ಸಂದರ್ಭದಲ್ಲಿ ಹೀಗೆ ಬಂಡಾಯ ಸಭೆ ಮಾಡುವುದು ಎಷ್ಟು ಸರಿ ಎಂಬುದಕ್ಕೆ ಮಾಜಿ ಸಂಸದ ರಮೇಶ್ ಕತ್ತಿ ವಿಚಿತ್ರವಾಗಿ ಉತ್ತರಿಸಿದ್ದಾರೆ. ಕೊರೊನಾ ವೈರಸ್‌ ಸಂಕಷ್ಟದಿಂದ ಯಾವ ಕೆಲಸ ನಿಂತಿವೆ ಎಂದು ಅವರು ಮಾಧ್ಯಮಗಳಿಗೆ ಮರು ಪ್ರಶ್ನೆ ಮಾಡಿದ್ದಾರೆ. ಮದುವೆ, ಮುಂಜಿ, ಮೃತರ ಅಂತ್ಯಕ್ರಿಯೆ ಯಾವುದು ನಿಂತಿಲ್ಲ. ರಾಜಕಾರಣವೂ ಹಾಗೆ. ಇದು ಹರಿಯುವ ನೀರು. ಲಾಕ್‌ಡೌನ್ ಸಂದರ್ಭದಲ್ಲಿಯೆ ರಾಜ್ಯಸಭಾ ಚುನಾವಣೆ ಬಂದಿದೆ. ಲೋಕಸಭಾ ಚುನಾವಣೆ ವೇಳೆ ಕೊಟ್ಟಿದ್ದ ಭರವಸೆಯನ್ನು ಮುಖ್ಯಮಂತ್ರಿಗಳಿಗೆ ನೆನಪಿಸಿದ್ದೇವೆ ಅಷ್ಟೇ ಎಂದು ಮಾಜಿ ಸಂಸದ ರಮೇಶ್ ಕತ್ತಿ ಹೇಳಿದ್ದಾರೆ. ಹಾಗೆ ಹೇಳುವ ಮೂಲಕ ಸಹೋದರ ಉಮೇಶ್ ಕತ್ತಿ ಬಂಡಾಯದ ನೇತೃತ್ವ ವಹಿಸಿಕೊಂಡಿದ್ದನ್ನು ಪರೋಕ್ಷವಾಗಿ ಸಮರ್ಥಿಸಿಕೊಂಡಿದ್ದಾರೆ.

Leave A Reply

Your email address will not be published.