ನಿರ್ಮಾಪಕಿ ಪಾರ್ವತಮ್ಮ ರಾಜ್ಕುಮಾರ್ ಅವರ ಮೂರನೇ ವರ್ಷದ ಪುಣ್ಯ ತಿಥಿ ಇಂದು. ಈ ಸಂದರ್ಭದಲ್ಲಿ ಪಾರ್ವತಮ್ಮ ಕುಟುಂಬದವರು ಸಮಾಧಿಗೆ ಪೂಜೆ ನೆರವೇರಿಸಿದರು.
ಮೂರು ಸೂಪರ್ ಸ್ಟಾರ್ಗಳಿಗೆ ಜನ್ಮವಿತ್ತು, ಒಬ್ಬ ಮಹಾನ್ ನಟನ ನೆರಳಾಗಿದ್ದ ಪಾರ್ವತಮ್ಮ ರಾಜ್ಕುಮಾರ್ ನಾಡು ಕಂಡ ಪ್ರಭಾವಿ, ಗಟ್ಟಿ ಗುಂಡಿಗೆಯ, ಧೈರ್ಯಶಾಲಿ ಮಹಿಳೆಯರಲ್ಲಿ ಒಬ್ಬರು.
1930 ರ ಡಿಸೆಂಬರ್ 6 ರಂದು ಜನಿಸಿದ ಪಾರ್ವತಮ್ಮ ರಾಜ್ಕುಮಾರ್ ಅವರು ತಮ್ಮ 77 ನೇ ವಯಸ್ಸಿನಲ್ಲಿ ಮೇ 31 ರ 2017 ರಂದು ನಿಧನ ಹೊಂದಿದರು. ಇಂದು ಅವರ ಮೂರನೇ ಪುಣ್ಯಸ್ಮರಣೆ.
ಶಿವರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್ ಹಾಗೂ ಪುನೀತ್ ರಾಜ್ಕುಮಾರ್ ಅವರ ತಾಯಿಯಾಗಿರುವ ಪಾರ್ವತಮ್ಮ. ಈ ಮೂವರು ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡುವಲ್ಲಿ ಪಾರ್ವತಮ್ಮ ಅವರ ಶ್ರೇಯವೂ ಇದೆ.
ನಿರ್ಮಾಪಕಿಯಾಗಿ ಕನ್ನಡ ಚಿತ್ರರಂಗಕ್ಕೆ ಹಲವು ಮರೆಯದ ಸಿನಿಮಾಗಳನ್ನು ನೀಡಿದ್ದಾರೆ ಪಾರ್ವತಮ್ಮ ರಾಜ್ಕುಮಾರ್. ಗಿರಿ ಕನ್ಯೆ, ಶಂಕರ್ ಗುರು, ಭಾಗ್ಯದಾ ಲಕ್ಷ್ಮಿ ಬಾರಮ್ಮ, ದೇವತಾ ಮನುಷ್ಯ ಸೇರಿ ಹಲವು ರಾಜ್ಕುಮಾರ್ ಅಭಿನಯದ ಸಿನಿಮಾಗಳಿಗೆ ಪಾರ್ವತಮ್ಮ ನಿರ್ಮಾಪಕಿ. ಜೊತೆಗೆ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ಕುಮಾರ್, ಪುನೀತ್ ರಾಜ್ಕುಮಾರ್ ಅವರ ಹಲವು ಸಿನಿಮಾಗಳನ್ನು ಪಾರ್ವತಮ್ಮ ಅವರು ನಿರ್ಮಿಸಿದ್ದಾರೆ.