ನವದೆಹಲಿ, ಜೂನ್ 8: ದೆಹಲಿ ಮುಖ್ಯಮಂತ್ರಿ, ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರಿಗೆ ವೈದ್ಯರ ಸಲಹೆ ಮೇರೆಗೆ ಕೊವಿಡ್ 19 ಪರೀಕ್ಷೆ ನಡೆಸಲಾಗುತ್ತದೆ ಎಂದು ದೆಹಲಿ ಸರ್ಕಾರದ ವಕ್ತಾರರು ಹೇಳಿದ್ದಾರೆ.
ಭಾನುವಾರ (ಜೂನ್ 7)ದಂದು ಕೇಜ್ರಿವಾಲ್ ಅವರಿಗೆ ಗಂಟಲಿನಲ್ಲಿ ಕೆರೆತ, ಜ್ವರ ಕಾಣಿಸಿಕೊಂಡಿದೆ. ಇದಕ್ಕೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಸದ್ಯಕ್ಕೆ ಕೇಜ್ರಿವಾಲ್ ಅವರಿಗೆ ಐಸೋಲೇಷನ್ ನಲ್ಲಿರಿಸಿ ಚಿಕಿತ್ಸೆ ಮುಂದುವರೆಸಲಾಗಿದೆ. ಉಸಿರಾಟದ ತೊಂದರೆ, ಕೆಮ್ಮು, ಗಂಟಲು ನೋವಿಗಾಗಿ ಪ್ರಕೃತಿ ಚಿಕಿತ್ಸೆ ಮೂಲಕ ಪರಿಹಾರ ಕಂಡುಕೊಂಡಿದ್ದ ಕೇಜ್ರಿವಾಲ್ ಬೆಂಗಳೂರಿನ ಜಿಂದಾಲ್ ಆಸ್ಪತ್ರೆಯಲ್ಲಿ ಈ ಮುಂಚೆ ಚಿಕಿತ್ಸೆ ಪಡೆದುಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.
ವೈದ್ಯರ ಸಲಹೆ ಮೇರೆಗೆ ಮಂಗಳವಾರ ಬೆಳಗ್ಗೆ ಕೊವಿಡ್ 19 ಸಂಬಂಧಿಸಿದ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಸದ್ಯಕ್ಕೆ ಅವರು ಮನೆಯಲ್ಲೇ ಉಳಿದುಕೊಂಡಿದ್ದಾರೆ. ಕೊವಿಡ್ 19 ವರದಿ ಬಂದ ಬಳಿಕ ಮುಂದಿನ ಕ್ರಮದ ಬಗ್ಗೆ ಪ್ರಕಟಿಸಲಾಗುತ್ತದೆ. ಕೇಜ್ರಿವಾಲ್ ಅವರಿಗೆ ಅನಾರೋಗ್ಯ ಪರಿಸ್ಥಿತಿ ಉಂಟಾದ ಕೂಡಲೇ ಅವರ ಎಲ್ಲಾ ಅಧಿಕೃತ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ. ಸಭೆಗಳನ್ನು ಮುಂದೂಡಲಾಗಿದ್ದು, ಹೋಂ ಕ್ವಾರಂಟೈನ್ ನಲ್ಲಿರಲು ಸಿದ್ಧತೆ ನಡೆಸಲಾಗಿರುವ ಮಾಹಿತಿಯಿದೆ.