Ultimate magazine theme for WordPress.

ದೆಹಲಿ ತಬ್ಲಿಘಿ ನಂಟು: 294 ವಿದೇಶಿಗರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆ

0

ದೆಹಲಿ, ಮೇ 27: ದೆಹಲಿಯ ನಿಜಾಮುದ್ದೀನ್ ಮರ್ಕರ್ಜ್‌ನಲ್ಲಿ ನಡೆದ ತಬ್ಲಿಘಿ ಸಮಾವೇಶದಲ್ಲಿ ಭಾಗವಹಿಸಿದ್ದ ಸುಮಾರು 294 ಜನ ವಿದೇಶಿಗರ ವಿರುದ್ಧ ದೆಹಲಿ ಅಪರಾಧ ವಿಭಾಗದ ಪೊಲೀಸರು ಸಾಕೇತ್ ನ್ಯಾಯಾಲಯದಲ್ಲಿ ಬುಧವಾರ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಲಿದ್ದಾರೆ.

ಕೊರೊನಾ ವೈರಸ್‌ ಭೀತಿ ಎದುರಾಗಿದ್ದ ಸಂದರ್ಭದಲ್ಲಿ ಧಾರ್ಮಿಕ ಸಭೆ ಮಾಡಿ ಕಾನೂನು ಉಲ್ಲಂಘಿಸಿದ್ದಾರೆ ಹಾಗೂ ವಿಸಾ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂಬ ಆರೋಪದಲ್ಲಿ ಸುಮಾರು 13 ದೇಶಗಳ ಪ್ರಜೆಗಳನ್ನು ವಶಕ್ಕೆ ಪಡೆಯಲಾಗಿತ್ತು. ಈ ಪೈಕಿ ಹಲವರು ಸೌದಿ ಅರೇಬಿಯಾ, ಮಲೇಷ್ಯಾ, ಇಂಡೋನೇಷ್ಯಾ ಮತ್ತು ಬ್ರೆಜಿಲ್‌ಗೆ ಸೇರಿದವರು ಇದ್ದಾರೆ.

ಮಾರ್ಚ್ ತಿಂಗಳಲ್ಲಿ ದೆಹಲಿಯ ನಿಜಾಮುದ್ದೀನ್‌ನಲ್ಲಿ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಭೆಯಲ್ಲಿ ವಿದೇಶಿಗರು ಸೇರಿದಂತೆ ಭಾರತದ ಹಲವು ರಾಜ್ಯಗಳಿಂದ ಸಾವಿರಾರು ಮುಸ್ಲಿಂ ಸುಮುದಾಯದವರು ಭಾಗಿಯಾಗಿದ್ದರು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅನೇಕರಿಗೆ ಕೊರೊನಾ ವೈರಸ್ ಅಂಟಿಕೊಂಡಿದೆ.

ದೇಶದಲ್ಲಿ ಕೊರೊನಾ ವೈರಸ್ ಹರಡಲು ಈ ಕಾರ್ಯಕ್ರಮ ಪ್ರಮುಖ ಕಾರಣ ಆಯಿತು ಎಂಬ ಆರೋಪದಲ್ಲಿ, ತಬ್ಲಿಘಿ ಸಮಾವೇಶ ಆಯೋಜಿಸಿದ್ದ ಮುಖ್ಯಸ್ಥ ಮೌಲಾನ ಸಾದ್ ಹಾಗೂ ಪಾಲ್ಗೊಂಡಿದ್ದ ವಿದೇಶಿಗರ ವಿರುದ್ಧ ದೂರು ದಾಖಲಿಸಲಾಗಿತ್ತು.

ತಬ್ಲಿಘಿ ಸಮಾವೇಶದ ಮುಖ್ಯಸ್ಥನ ಮೌಲಾನ ಸಾದ್ ವಿರುದ್ಧ ಸಾಂಕ್ರಾಮಿಕ ರೋಗ ಕಾಯ್ದೆ ಅಡಿ ಎಫ್ ಐ ಆರ್ ದಾಖಲಾಗಿದೆ. ಜೊತೆಗೆ ಮನಿ ಲಾಂಡರಿಂಗ್ ತಡೆಗಟ್ಟುವ ಕಾಯ್ದೆ ಅಡಿಯಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಮನಿ ಲಾಂಡರಿಂಗ್ ಪ್ರಕರಣವನ್ನು ದಾಖಲಿಸಿದೆ.

Leave A Reply

Your email address will not be published.