ಉಡುಪಿ, ಜೂನ್ 09: ಕೊರೊನಾ ವೈರಸ್ ಭೀತಿ ಹೆಚ್ಚಿರುವ ಕಾರಣ ತಮಿಳುನಾಡಿನಲ್ಲಿ 10ನೇ ತರಗತಿಯ ಪರೀಕ್ಷೆಗಳನ್ನು ರದ್ದುಗೊಳಿಸಿ, ಪರೀಕ್ಷೆ ಬರೆಯದೇ ಎಲ್ಲ ವಿದ್ಯಾರ್ಥಿಗಳನ್ನು ಮುಂದಿನ ತರಗತಿಗೆ ತೇರ್ಗಡೆ ಮಾಡುವಂತೆ ಶಾಲೆಗಳಿಗೆ ತಮಿಳುನಾಡು ರಾಜ್ಯ ಶಿಕ್ಷಣ ಇಲಾಖೆ ಸೂಚಿಸಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್, “ತಮಿಳು ನಾಡಿನಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ರದ್ದು ಮಾಡಲಾಗಿದೆ. ನಾವು ಪರೀಕ್ಷೆ ರದ್ದು ಮಾಡುವ ಸ್ಥಿತಿಯಲ್ಲಿಲ್ಲ. ನಾವು ಬಹಳ ಮುಂದೆ ಹೋಗಿದ್ದೇವೆ. ನಾವು ಅವರನ್ನು ಫಾಲೋ ಮಾಡಲ್ಲ” ಎಂದು ತಿಳಿಸಿದ್ದಾರೆ.
ಇಂದು ಉಡುಪಿಯಲ್ಲಿ ಸಭೆ ನಡೆಸಿ ಮಾತನಾಡಿದ ಅವರು, ಶಿಕ್ಷಣಕ್ಕೆ ಸಂಬಂಧಿಸಿದಂತೆ ಹಲವು ವಿಷಯಗಳನ್ನು ಹಂಚಿಕೊಂಡರು. “ನಾವು ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ರದ್ದು ಮಾಡುವುದಿಲ್ಲ. ಮಕ್ಕಳ ಆರೋಗ್ಯಕ್ಕೆ ಆದ್ಯತೆ ಕೊಟ್ಟು ಎಚ್ಚರಿಕೆ ಕ್ರಮ ವಹಿಸಿ ಪರೀಕ್ಷೆ ನಡೆಸುತ್ತೇವೆ. ಅವರು ನಮ್ಮನ್ನು ಅನುಸರಿಸಬೇಕು. ಕೇಂದ್ರ ಸಚಿವಾಲಯದ ಜೊತೆ ಈಗಾಗಲೇ ಚರ್ಚೆ ಆಗಿದೆ. ಮಕ್ಕಳ ಮನಸ್ಸಲ್ಲಿ ಅನಗತ್ಯ ಗೊಂದಲ ಸೃಷ್ಟಿ ಬೇಡ” ಎಂದು ತಿಳಿಸಿದ್ದಾರೆ.