ಲಕ್ನೊ, ಫೆಬ್ರವರಿ 19: ವೀಸಾ ನಿಯಮ ಹಾಗೂ ಕೊರೊನಾ ಮಾರ್ಗಸೂಚಿ ಉಲ್ಲಂಘನೆ ಮಾಡಿ ತಬ್ಲಿಘಿ ಜಮಾತ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಏಳು ವಿದೇಶಿಯರು ಸೇರಿದಂತೆ ಹದಿನೇಳು ಜನರನ್ನು ನ್ಯಾಯಾಲಯ ಆರೋಪಮುಕ್ತ ಮಾಡಿದೆ.
ಮಾರ್ಚ್ ತಿಂಗಳಿನಲ್ಲಿ ದೇಶದಲ್ಲಿ ಕೊರೊನಾ ಸೋಂಕಿನ ನಿಯಂತ್ರಣಕ್ಕೆ ಲಾಕ್ ಡೌನ್ ವಿಧಿಸಿದ್ದು, ಈ ವೇಳೆ ವೀಸಾ ನಿಯಮ ಹಾಗೂ ಕೋವಿಡ್ 19 ನಿಯಮಗಳನ್ನು ಉಲ್ಲಂಘನೆ ಮಾಡಿದ ಆರೋಪದಲ್ಲಿ ಇವರ ಮೇಲೆ ಪ್ರಕರಣ ದಾಖಲಿಸಲಾಗಿತ್ತು.
ಆರೋಪಕ್ಕೆ ಸಾಕ್ಷ್ಯಾಧಾರಗಳ ಕೊರತೆ ಕಾರಣದೊಂದಿಗೆ ಹದಿನೇಳು ಮಂದಿಯನ್ನು ಆರೋಪದಿಂದ ಮುಕ್ತಗೊಳಿಸುತ್ತಿರುವುದಾಗಿ ಉತ್ತರ ಪ್ರದೇಶ ಸಿಜೆಎಂ ನ್ಯಾಯಾಲಯ ಆದೇಶ ಹೊರಡಿಸಿದೆ. ಆರೋಪಮುಕ್ತವಾಗಿರುವ ಈ ಹದಿನೇಳು ಮಂದಿಯಲ್ಲಿ ಏಳು ಜನರು ಇಂಡೋನೇಷ್ಯಾದವರಾಗಿದ್ದಾರೆ. ದೆಹಲಿಯಲ್ಲಿ ಮಾರ್ಚ್ ತಿಂಗಳಲ್ಲಿ ನಡೆದ ತಬ್ಲಿಘಿ ಜಮಾತ್ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ 36 ವಿದೇಶಿ ಪ್ರಜೆಗಳ ಮೇಲೆ ಕ್ರಿಮಿನಲ್ ಪ್ರಕರಣ ಹಾಕಲಾಗಿತ್ತು. 2020ರ ಜನವರಿ 20ರಂದು ಅಧಿಕೃತ ವೀಸಾ ಹಾಗೂ ಪಾಸ್ಪೋರ್ಟ್ನೊಂದಿಗೆ ಭಾರತಕ್ಕೆ ಬಂದಿದ್ದಾಗಿ ವಿದೇಶಿಯರು ವಿಚಾರಣೆ ವೇಳೆ ನ್ಯಾಯಾಲಯಕ್ಕೆ ತಿಳಿಸಿದ್ದರು. ಡಿಸೆಂಬರ್ನಲ್ಲಿ ಇವರಿಗೆ ಜಾಮೀನು ಮಂಜೂರು ಮಾಡಲಾಗಿತ್ತು.