ಮುಂಬೈ, ಮೇ 17: ಮಾರಣಾಂತಿಕ ಕೊರೊನಾ ವೈರಸ್ ವಿಶ್ವದೆಲ್ಲಡೆ ಮಾಡಿರುವ ಜೀವ ಹಾನಿ, ಮೂರು ಲಕ್ಷವನ್ನು ದಾಟಿಯಾಗಿದೆ. ಭಾರತದಲ್ಲಿ ಇದುವರೆಗೆ 2,872 ಜನ ಸಾವನ್ನಪ್ಪಿದ್ದಾರೆ.
ವೈರಸ್ ಹಾನಿಯಿಂದ ಹೆಚ್ಚು ಪರಿಣಾಮ ಬೀರಿದ ರಾಜ್ಯವೆಂದರೆ ಅದು ಮಹಾರಾಷ್ಟ್ರ. ಅಲ್ಲಿ 1,135 ಸಾವನ್ನಪ್ಪಿದ್ದು, ಸೋಂಕಿತರ ಸಂಖ್ಯೆ 30,706ಕ್ಕೆ ಏರಿದೆ. ಒಂದೊಂದು ಮನೆಯಲ್ಲಿ ಒಂದೊಂದು ಕರಳು ಹಿಂಡುವ ಕಥೆ. ಇದೇ ರೀತಿಯ ಮನಕಲಕುವ ಕಥೆ ನಗರದ ಗೋರೆಗಾಂವ್ ಪೂರ್ವದ ಹನ್ನೊಂದು ವರ್ಷದ ಹರ್ಷಿಲ್ ಸಿಂಗ್ ಎನ್ನುವ ಬಾಲಕನದ್ದು. ಈ ಹುಡುಗನ ತಂದೆ ಸುರೇಂದ್ರ, ಏಪ್ರಿಲ್ 13ರಂದು ಕೊರೊನಾ ದಿಂದ ಮೃತರಾದರು.
ಪತಿಗೆ ಕೊರೊನಾ ಸೋಂಕು ತಗಲಿದೆ ಎಂದು ತಿಳಿದಾಗಲೇ ಮನನೊಂದಿದ್ದ ಪತ್ನಿ, ಪತಿಯ ಸಾವಿನ ನಂತರ ಇನ್ನಷ್ಟು ಜರ್ಝರಿತರಾದರು. ಅಲ್ಲಿಗೆ ಮುಗಿಯಲಿಲ್ಲ, ಮನೆಯಲ್ಲಿ ಒಬ್ಬರಿಗೆ ವೈರಸ್ ತಗುಲಿದರೆ, ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಲಾಗುವುದರಿಂದ, ಬಾಲಕ ಹರ್ಷಿತ್ ಮತ್ತು ಆತನ ತಾಯಿಯನ್ನು ಪರೀಕ್ಷೆಗೆ ಒಳಪಡಿಸಲಾಯಿತು.