ಮಾರಣಾಂತಿಕ ಕೊರೊನಾ ವೈರಸ್ ಅನ್ನು ತಡೆಗಟ್ಟಲು ಲಾಕ್ ಡೌನ್ ಘೋಷಿಸಿದ್ಮೇಲೆ ಜಾಗತ್ತಿನಾದ್ಯಂತ ಲೆಕ್ಕವಿಲ್ಲದಷ್ಟು ಮಂದಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕೆಲಸಕ್ಕೆ ಕುತ್ತು ಬಂದ ಕಾರಣ ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿಬಿಟ್ಟಿದೆ.
ಒಂದು ಕಡೆ ಕೊರೊನಾ ವೈರಸ್ ಹೊಡೆತ ಇನ್ನೊಂದು ಕಡೆ ಸಿರಿಯನ್ ಸಿವಿಲ್ ವಾರ್. ಇವೆರಡರಿಂದ ಅಕ್ಷರಶಃ ಹೆಣಗಾಡುತ್ತಿರುವ ಸಿರಿಯನ್ ನಿರಾಶ್ರಿತರು ಟರ್ಕಿಯಲ್ಲಿ ಜೀವನೋಪಾಯಕ್ಕಾಗಿ ಕಿಡ್ನಿಯನ್ನೇ ಮಾರಾಟ ಮಾಡಿಕೊಳ್ಳುತ್ತಿದ್ದಾರೆ.
ಈ ಸಂಗತಿ ಸಿಬಿಎಸ್ ನ ‘ಸೆಲ್ಲಿಂಗ್ ಆರ್ಗನ್ಸ್ ಟು ಸರ್ವೈವ್’ ಎಂಬ ಸಾಕ್ಷ್ಯಚಿತ್ರದಲ್ಲಿ ಬಹಿರಂಗವಾಗಿದೆ. ಕಿಡ್ನಿ ಮತ್ತು ಲಿವರ್ ದಾನ ಮಾಡಿದರೆ ದುಡ್ಡು ಕೊಡುವುದಾಗಿ ಹಾಕಿದ್ದ ಫೇಸ್ ಬುಕ್ ಪೋಸ್ಟ್ ಕುರಿತಾದ ತನಿಖಾ ವರದಿಗಾಗಿ ಪತ್ರಕರ್ತರು ಟರ್ಕಿಗೆ ತೆರಳಿದ್ದರು.
ಜೀವನ ನಿರ್ವಹಣೆಗಾಗಿ ಕಿಡ್ನಿಯನ್ನೇ ಮಾರುತ್ತಿರುವ ಸಿರಿಯನ್ ನಿರಾಶ್ರಿತರ ಸ್ಥಿತಿಯನ್ನ ಲಾಭದಾಯಕವಾಗಿ ಬಳಸಿಕೊಳ್ಳುವ ಪ್ರಯತ್ನ ಟರ್ಕಿಯಲ್ಲಿ ಸಾಗುತ್ತಿದೆ. ಕಿಡ್ನಿ ದಾನ ಮಾಡಿದವರಿಗೆ ಕಡಿಮೆ ಹಣ ನೀಡಿ ಮೋಸ ಮಾಡುತ್ತಿರುವುದು ಪತ್ರಕರ್ತರ ರಹಸ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.
ಸಿರಿಯಾದಲ್ಲಿ ಸಿವಿಲ್ ವಾರ್ ಆರಂಭವಾದ್ಮೇಲೆ ಟರ್ಕಿಗೆ ಬಂದ ಅಬು ಅಬ್ದುಲ್ಲಾ, ಫೇಸ್ ಬುಕ್ ಪೋಸ್ಟ್ ನೋಡಿ ತನ್ನ ಕಿಡ್ನಿಯನ್ನ $10,000 ಗೆ ಮಾರಲು ಮುಂದಾದರು. ಕಿಡ್ನಿಯನ್ನ ಪಡೆದುಕೊಂಡ ಬ್ರೋಕರ್, ಅಬು ಅಬ್ದುಲ್ಲಾಗೆ ನೀಡಿದ್ದು ಅರ್ಧದಷ್ಟು ಹಣ ಮಾತ್ರ. ದುರಂತ ಅಂದ್ರೆ, ಕಿಡ್ನಿ ಪಡೆದ ಬ್ರೋಕರ್ ಅಬು ಅಬ್ದುಲ್ಲಾಗೆ ನೀಡಬೇಕಾದ ವೈದ್ಯಕೀಯ ನೆರವನ್ನೂ ನೀಡಿಲ್ಲ.