ಚಾಮರಾಜನಗರ, ಮೇ 27: ಎರಡು ಕುಟುಂಬಗಳ ವೈಯಕ್ತಿಕ ದ್ವೇಷದಿಂದಾಗಿ ಮಂಗಳವಾರ ರಾತ್ರಿ ನಡೆದ ಘರ್ಷಣೆಯಲ್ಲಿ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಯ ಜಾಕೀರ್ ಹುಸೇನ್ ನಗರದ ಮೂವರು ಕೊಲೆಯಾಗಿದ್ದಾರೆ.
ಕೊಲೆ ಆದವರನ್ನು ಇದ್ರಿಸ್ (30), ಕೈಸರ್(30) ಮತ್ತು ಜಕ್ಕಾವುಲ್ಲಾ(35) ಎಂದು ಗುರುತಿಸಲಾಗಿದ್ದು, ಅಸ್ಲಾಂ ಮತ್ತು ಜಮೀರ್ ಸಂಗಡಿಗರು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಕೆಲ ವರ್ಷಗಳಿಂದ ಈ ಎರಡು ಕುಟುಂಬದ ಮಧ್ಯೆ ವೈಯಕ್ತಿಕ ದ್ವೇಷ ಇತ್ತು ಎನ್ನಲಾಗಿದೆ.
ನಾಲ್ಕು ವರ್ಷಗಳ ಹಿಂದೆ ಈಗ ಕೊಲೆಯಾಗಿರುವ ಇದ್ರಿಸ್, ಕೈಸರ್ ಹಾಗೂ ಜಕ್ಕಾವುಲ್ಲಾ ಕುಟುಂಬದವರು ಮಾರಕಾಸ್ತ್ರಗಳಿಂದ ಅಸ್ಲಾಂ ಮತ್ತು ಜಮೀರ್ ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದರು. ಈ ಸಂಬಂಧ ಗುಂಡ್ಲುಪೇಟೆ ಜೆಎಂಎಫ್ ಸಿ ಕೋರ್ಟ್ ನಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿತ್ತು.
ಈ ಘಟನೆಯ ನಂತರ ಎರಡೂ ಕುಟುಂಬದ ನಡುವೆ ದ್ವೇಷ ಭುಗಿಲೆದ್ದಿತ್ತು. ಈ ಘಟನೆಗೆ ಪ್ರತೀಕಾರವಾಗಿ ಅಸ್ಲಾಂ ಕುಟುಂಬದವರು ಮಂಗಳವಾರ ರಾತ್ರಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಮೂವರನ್ನು ಬಲಿ ತೆಗೆದುಕೊಂಡಿದ್ದಾರೆ.