ದಾವಣಗೆರೆ, ಮೇ 23; ಸಾವರ್ಕರ್ ಗೆ ಭಾರತರತ್ನ ನೀಡಬಾರದೆಂಬ ಹೇಳಿಕೆ ಹಿಂಪಡೆದು ಕ್ಷಮೆ ಯಾಚಿಸಬೇಕು ಎಂಬ ಬೆದರಿಕೆ ಕರೆಗಳು ಹಾಗೂ ಪತ್ರಗಳು ತಮಗೆ ಬರುತ್ತಲೇ ಇವೆ. ನಿನ್ನೆಯೂ ಬೆದರಿಕೆ ಪತ್ರ ಬಂದಿದೆ. ಈ ಬಾರಿ ಮೇ 28ರೊಳಗೆ ಹೇಳಿಕೆ ಹಿಂಪಡೆದು ಕ್ಷಮೆ ಯಾಚಿಸಬೇಕೆಂಬ ಒತ್ತಡ ಹಾಕಲಾಗಿದೆ ಎಂದು ಕೆಪಿಸಿಸಿ ಮಾಧ್ಯಮ ವಕ್ತಾರ ಡಿ.ಬಸವರಾಜ್ ಆತಂಕ ವ್ಯಕ್ತಪಡಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಇಂದು ಮಾತನಾಡಿದ ಅವರು, ಇಂದು ಪೂರ್ವವಲಯ ಐಜಿಪಿ ಅವರ ಬಳಿ ತೆರಳಿ ದೂರು ನೀಡಿದ್ದೇನೆ. ಅಲ್ಲದೇ ಸಿಎಂ ಯಡಿಯೂರಪ್ಪ, ಕೆಪಿಸಿಸಿ ಅಧ್ಯಕ್ಷ ಡಿ.ಶಿವಕುಮಾರ್ ಹಾಗೂ ಕಾಂಗ್ರೆಸ್ ಹೈಕಮಾಂಡ್ ಗಮನಕ್ಕೂ ತಂದಿದ್ದೇನೆ. ಕಳೆದ ಅಕ್ಟೋಬರ್ ನಲ್ಲಿ ಮಹಾರಾಷ್ಟ್ರ ರಾಜ್ಯ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಮಹಾರಾಷ್ಟ್ರ ಬಿಜೆಪಿ ಚುನಾವಣಾ ಪ್ರಣಾಳಿಕೆಯಲ್ಲಿ ಹಿಂದುತ್ವ ಪ್ರತಿಪಾದಕ ಸಾವರ್ಕರ್ ಗೆ ಮರಣೋತ್ತರವಾಗಿ ಭಾರತರತ್ನ ನೀಡುವ ಕುರಿತು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವ ಬಗ್ಗೆ ಪ್ರಸ್ತಾಪಿಸಿತ್ತು. ದೇಶದಾದ್ಯಂತ ಕಾಂಗ್ರೆಸ್ ಇದಕ್ಕೆ ವಿರೋಧ ವ್ಯಕ್ತಪಡಿಸಿತ್ತು.
ಅದರಂತೆ ಕೆಪಿಸಿಸಿ ಮಾಧ್ಯಮ ವಕ್ತಾರನಾಗಿ ನಾನೂ ದಾವಣಗೆರೆಯಲ್ಲಿ ಪತ್ರಿಕಾಗೋಷ್ಠಿ ಮೂಲಕ ಸಾರ್ವಕರ್ ಗೆ ಭಾರತರತ್ನ ನೀಡಲು ವಿರೋಧ ವ್ಯಕ್ತಪಡಿಸಿದ್ದೆ. ಅಂದಿನಿಂದಲೂ ನನಗೆ ಬೆದರಿಕೆ ಕರೆ ಬರುತ್ತಿದೆ. ಮೊದಲ ಬೆದರಿಕೆ ಬಂದಾಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಲಾಗಿತ್ತು. ನಂತರ ಇದೇ ಜನವರಿಯಲ್ಲಿ ಮತ್ತೊಮ್ಮೆ ಬೆದರಿಕೆ ಕರೆ ಬಂದಿತ್ತು. ನಿರಂತರವಾಗಿ ಬೆದರಿಕೆ ಬರುತ್ತಲೇ ಇದೆ. ನಿನ್ನೆಯೂ ಬೆದರಿಕೆಯ ಪತ್ರ ಬಂದಿದೆ ಎಂದು ತಿಳಿಸಿದರು.